ಸಂಗೀತ ಮತ್ತೆ ಬದುಕಿ ಬಂದಂತೆ…
ಲೋಕದಾಚೆಯಿಂದ ಇಲ್ಲಿಗೆ ತಂದವರು,
ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ
ಕೈ ಹಿಡಿದು ನಡೆಸಿದವರು ಯಾರು?
ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ
ಮಾಯವಾದ ಒಂದು ಕ್ಷಣವೊಂದು
ಮತ್ತೆ ಹಿಂದಿರುಗಿದಂತೆ,
ನೆಲದೊಳಗಿನ ಸ್ವರಗಳ ಮೇಲೆತ್ತಿದಂತೆ
ಶಬ್ದವಿಲ್ಲದ ಶಬ್ದ ಹುಟ್ಟುವುದು
ಸಾವಿನ ಗಳಿಗೆಯಲ್ಲಿ-ತಥಾಸ್ತು.
ಶಾಲೆಯೊಳಗಿನ ಚರ್ಚಿನಲ್ಲಿ
ಎಷ್ಟೋ ಬಾರಿ ಮಾತಾಡಿದ್ದೇನೆ
ವಿಶ್ವಾಸವಿಲ್ಲದೆ. ಈಗ ಅವೇ ಮಾತನ್ನು
ಇಲ್ಲದ ತುಟಿಗಳು ನುಡಿಯುವುದು ಕೇಳುತ್ತೇನೆ.
ಗಳಿಗೆ ಪಾತ್ರೆಯಲ್ಲಿ ಮರಳು ಸುರಿಯುವ ಶಬ್ದ.
ಇರುಳಿನಲ್ಲಿ ನಾನು ಹೊರಳಿದಂತೆ ಹೊರಳುವ ಹೊತ್ತು,
ತಲೆಯೊಳಗೆ ಬಾರಿಸುವ ಗಂಟೆ ಸದ್ದು,
‘ಈ ಜಗತಿನಲ್ಲಿ ಸಾಯಲಿರುವ ಮೊದಲ ಮನುಷ್ಯ ನಾನಲ್ಲ’
ಎಪಿಕ್ಟೆಟಸ್‍ನಂತೆ ಹೇಳಿಕೊಳ್ಳುತ್ತೇನೆ.
ಆ ಕ್ಲಣದಲ್ಲೇ ನನ್ನ ರಕ್ತದೊಳಗೆ
ಜಗತ್ತುಮುರಿದು ಬೀಳುತ್ತಿರುವ ಸದ್ದು.
ಮುಂಬೆಳಕಿಲ್ಲದ ನಾಡಿನಿಂದ ಹಿಂದಿರುಗಿದಾಗ
ಗಿಲ್ಗಮಿಶ್ ನಿಗಾದ ದುಃಖವೆ ನನ್ನ ದುಃಖ.
ಮಬ್ಬುಗತಲ ಈ ಭೂಮಿಯ ಮೇಲೆ
ಪ್ರತಿಯೊಬ್ಬ ಮನುಷ್ಯನೂ ಒಬ್ಬ ಆಡಂ
ಅವನೊಂದಿಗೇ ಜಗತ್ತುತೊಡಗಿ
ಅವನೊಂದಿಗೇ ಮುಗಿಯುವುದು.
‘ಮೊದಲು’ ಮತ್ತು ‘ಆಮೇಲೆ’ ಅನ್ನುವ
ಕಲ್ಲಿನ ಚೌಕಂಸಗಳ ನಡುವೆ
ಮತ್ತೆಂದೂ ಮರಳದ ಈ ಕ್ಷಣದಲ್ಲಿ
ನಾನೇ ಪ್ರಥಮ ಮನುಷ್ಯ, ನಾನೇ ಕೊನೆಯವನು ಕೂಡಾ.
ಹೀಗನ್ನುತ್ತಿರುವಾಗ ಕ್ಷಣ…
ಶುದ್ಧಕಾಲ.
*****
ಮೂಲ: ಆಕ್ಟೇವಿಯೊ ಪಾಝ್