(ಚೌಪದಿ)
ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? |
ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| ||
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? |
ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧||
“ಹಸೆಯ ಮಗುವನು ಮೊನ್ನೆ ಬಂದವರು ನೋಡಿ, |
ಮಸುಕು ಬಿಳಿ ಕಣ್ಣುಗಳ ಕದಗಳನು ಹೂಡಿ, ||
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ, |
ಬಿಸಿಲುಕನ್ನಡಿಯನ್ನು ಮಾಡಿನಲ್ಲಿ ಮಾಡಿ,” ||೨||
“ಸುದ್ದ ನೀರನು ಮೀಸಿ, ಅರಸಿನವ ಪೂಸಿ, |
ಗದ್ದೆ ಗೋರುವ ಹಲಗೆಯಲ್ಲಿ ಎಲೆ ಹಾಸಿ, ||
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ, |
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?” ||೩||
ಚೆನ್ನಾಗಿ ಸೇಸೆಮಳೆ ಸೂಸುತಿರೆ ಕನ್ನೆ, |
ನಿನ್ನೊಡನಿರುಳ್ ನಿದ್ದೆಯಲ್ಲಿ ಕಂಡ ನಿನ್ನೆ- ||
‘ಬನ್ನಿ ಬಾ ಬಾ’ ಎಂದು ಮಾಡಿ ಕೈಸನ್ನೆ |
ನನ್ನೆದುರು ಬಂದು ಹೋದಾ ಪುಟ್ಟನನ್ನೆ. ||೪||
ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ. |
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ. ||
ಉಬ್ಬಸರಿ ಮೊದಲೆ ಬಾಲನ ಮೈಯು ತಾರೆ, |
ಅಬ್ಬೆ! ನಡೆಯುವನೆಂತು? ಬೇಗ ಕರತಾರೆ. || ೫||
ಬಳ್ಳಿ ಉಯ್ಯಾಲೆಯಲ್ಲಿ ಗಿಳಿಯ ಮರಿ ತೂಗಿ, |
ಉಳ್ಳಲರ ಜೇನ್‌ಗುಡಿದು ಮರಿದುಂಬಿ ಕೂಗಿ, ||
ಬೆಳ್ಳಿ ನೀರ್ ಬಿಸಿಲಲ್ಲಿ ಮುಳುಗಿದಂತಾಗಿ |
ಹಳ್ಳಿ ಹಗಲಿರೆ-ಪುಟ್ಟನಾಡುವನೆ ಹೋಗಿ? ||೬||
ತಾಯ್ದನದ ಬಳಿ ಹೋಗದೀ ಕರುವು ನಿಂದು, |
ಕಾಯ್ದನಂ ಕರೆಯುತಿದೆ ನೆನಸಿ ‘ಮ್ಬೇ’ ಎಂದು. ||
ನಾಯ್ದುಗುಡದಲಿ ಬಿಡದೆ ಮಗುವಿದ್ದ ಸ್ಥಲವಾ, |
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ. ||೭||
“ಇವನ ಚಿಲುವಿನ ಪುಂಜ ಹೋಯ್ತೆ ಮರಿಯಲ್ಲೆ! |
ಸವೆಯಿತೇ ಕಾಲವಂಕುರದ ಪರಿಯಲ್ಲೆ! ||
ಕುವರನಾ ಬಾಳೆ ಕಂದಿತೆ ಕಂದಿನಲ್ಲೆ! |
ಸವಿ ಬಂದುಗೇನಾಯ್ತು ನನೆಸಂದಿನಲ್ಲೆ! ||೮||
ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ, |
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ, ||
ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು, !
ಕೈಪರೆ ಹೊಡೆವುದೆಂತು? ಬರುವುದೇ ಪುಟ್ಟು,? ||೯||
ನರಿಮೊಗರು ಜಾತ್ರೆಯಲಿ ನನ್ನನ್ನು ಕಂಡು, |
ಅರರೆ ತಮ್ಮನನೇಕೆ ನಾನು ಕರಕೊಂಡು |
ಬರಲಿಲ್ಲ? ಎಂದಾ ಗೆಳೆಯರೆನ್ನ ಕೇಳೆ, |
ಮರುಮಾತು ನಾನೇನು ಕೊಡಲಮ್ಮ ನಾಳೆ? ||೧೦||
ಒಬ್ಬನೇ ತಿನಿಸುಣಿಸು ನಾ ಬೇಡಲಾರೆ. |
ಇಬ್ಬರಿಲ್ಲದೆ ಈಗ ನಾನಾಡಲಾರೆ, ||
ತಬ್ಬಿಕೊಂಡೆನ್ನ ನೀಂ ಅಳುವುದೇನಿ೦ತು? |
ಅಬ್ಬೆ, ಅಳದಿರು ಪುಟ್ಟ ಎಲ್ಲಿಹನು ನಿಂತು? ||೧೧||
ತಾಯಿ- ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ! |
ಎತ್ತ ಹೋದನು ತಮ್ಮ ಎಂಬುದು ತಿಳಿಯೆ. ||
ಇತ್ತವನೆ ಎತ್ತಿದನು! ಕೇಳು, ಪುತ್ಥಳಿಯೇ! |
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ? ||೧೨||
ಮುಗುವು ಮುದ್ದಿನ ಮೊಗವು, ಅವನಿಲ್ಲಿ ಬಾರಂ |
ಆಗಲಿ ನಮ್ಮನು ಹೋದ ಹೋದ ಬಹುದೂರಂ ||
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ |
ಸೋಗನಿದ್ದೆಗೊಂಡವನು ಬರುವನೇ ಇತ್ತ? ||೧೩||
ಮಗು- “ಈಗಲೇ ಹೊರಡುವೆನು, ಕೈ ಬಿಡೌ, ಅಮ್ಮಾ ! |
ಬೇಗ ಅಪ್ಪನು ಬರುವ ಮುಂಚೆಯೇ, ಅಮ್ಮಾ! ||
ಹೋಗುವೆನು, ಹೋಗುವೆನು; ಹೊರ ಹೊರಡು; ಅಮ್ಮಾ! |
ಕೂಗಿ ಅಳದಿರು; ದಾರಿ ತೋರಿಸೌ! ಅಮ್ಮಾ! || ೧೪ ||
ತಾಯಿ-ಚಂದು ಕೇಳ್! ದಾರಿಯಲಿ ನಾ ಪೋಪೆ ಮುಂದೆ |
ಬಂದವನು ಬಳಿಕ ನಿನ್ನಯ ಮುದ್ದು ತಂದೆ ||
ಮಂದಿ ಮಕ್ಕಳು ಪಡೆದು ಬಾ ನೀನು ಹಿಂದೆ. |
ಎಂದವನ ಬಾಯಿ ಬಿಗಿದಳು ಮುದ್ದಿನಿಂದೆ. ||೧೫||
ಆರಲಿಲ್ಲವು; ತಾಯ ಮನದ ಪರಿತಾಪಂ |
ಆರಿದುದು ಮಾತೆಯಾ ಮನೆಯ ಮಣಿದೀಪಂ. ||
ಆರಲಿಲ್ಲವು ತಾಯ ಕಂಬನಿಯ ಕೂಪಂ |
ಆರಿದುದು ಭಾಗ್ಯಾಬ್ಧಿ, ಅಯ್ಯಯ್ಯೋ ಪಾಪಂ! ||೧೬||
*****
(ಪದ್ಯ ಪುಸ್ತಕ)