ಸುರುಳಿ ಸುತ್ತಿಟ್ಟ ಬಾಳಬೀದಿಯ ನೆನಪು ಕೆರಳಿ
ಮರಳಿ ಬಿಚ್ಚಿ ಹೊರಳ ತೊಡಗುತ್ತೇನೆ ಆಗೀಗ;
ಹಳೆಯ ಅರಳಿಮರ
ಹೊಳೆಮೆಟ್ಟಲು
ಗರುಡಗಂಬ
ಚಿಕ್ಕದೊಡ್ಡದ್ದೆಲ್ಲ ಚಿಮ್ಮಿ ನಿಲ್ಲುತ್ತವೆ ಹುಗಿದ ತಳದಿಂದ
ಹುಟ್ಟಿಕೊಳ್ಳುತ್ತದೆ ಸತ್ತ ಗಿಡ
ಸುತ್ತದಡ ನಡುವೆ
ಕತ್ತರಿಸಿ ತೆಗೆದ ಆಕಾಶದಂತೆ ಕಪ್ಪಗೆ
ಬೆತ್ತಲೆ ಮೈಯ ನುಣುಪು ಜಲ
ಬೆತ್ತಲೆ ಮೈಯ ತುಂಗಾನದಿಯ ಪಿಸುದನಿ
ನೆಕ್ಕಿಬಿಡುತ್ತದೆ ಒಳಗೆ ಮೊಳೆಯುತ್ತಿರುವ ಉರಿಯ
ಹೊರಟುಬಿಡುತ್ತದೆ ಮನಸ್ಸು ಹೊಡೆದುಕೊಂಡು ಮೇವಿಗೆ
ಹಿಂಡು ಕುರಿಯ
ಕೂರುತ್ತೇನೆ ದಡದಲ್ಲಿ
ಕಾಲಾಡುತ್ತ ನೀರಲ್ಲಿ
ಕರೆಯುತ್ತೇನೆ ಒಬ್ಬೊಬ್ಬರಾಗಿ
ಕಾಡಿದ ಕೌರವರ ಕೂಡಿದ ಪಾಂಡವರ
ಕರೆಯುತ್ತೇನೆ ಕಂಪು ಕನಸುಗಳನ್ನು
ಎದೆಗೆ ಹಬ್ಬಿದ್ದ ಚೆಲುವೆಯರ
ಆಸೆಗೆ ಆಕೃತಿ ನೀಡಿದ ಅರುಣೋದಯ ಋಣಗಳ
ಆದರಿಸಿ ಆಲಿಂಗನದಲ್ಲಿ ಅಫಜಲರಾದ ನೆಂಟರ
ನಾಲಿಗೆಯಲ್ಲಿ ಜೆಟ್ ಬಿಡುವ ಕಾಲುನಡಿಗೆ ಕುಂಟರ
ಚೈತ್ರವರಳುತ್ತದೆ
ಜ್ಯೇಷ್ಠ ಕೆರಳುತ್ತದೆ.
ಮುಗಿಯುತ್ತದೆ ಮಾಗಿ ತಾಗಿ ಎಲ್ಲ ಕೋಲಾಹಲ
ಬಿಸಿಲು ಬೆಳುದಿಂಗಳೆಲ್ಲ ಜೊತೆಬೆರಳಂತೆ ನಿಂತು
ಒಂದೇ ಕೈಯಾಗಿದೆ ಅವು ಕಾಲೂರಿದ ನೆಲ
ಇಲ್ಲ ಎಲ್ಲ ಅರ್ಥವಾಗುತ್ತದೆ ಈಗ ನನಗೆ
ಬಿಚ್ಚಿ ನಿಲ್ಲುತ್ತವೆ ಪಾತ್ರಗಳೆಲ್ಲ ಗ್ರೀನ್ ರೂಮಿನಲಿ ತಮ್ಮ ತೊಡಿಗೆ
ಒಂದೇ ದಾರದಿಂದ ಆಗಿದೆ ಕಸೂತಿಯ
ಬಗೆಬಗೆ ಚಿತ್ರ, ಹೆಣಿಗೆ
ಸುಖದುಃಖ ಬ್ಯಾಂಡು ಹೊಡೆಯುತ್ತ ಹೊರಟಿದೆ
ವಿವೇಕದ ಮೆರವಣಿಗೆ.
*****