ಕ್ಷುಲ್ಲಕ ತೊಂದರೆಯೊದಗಿದರೂ ಮೋರೆಗೆ ಸೆರಗುಹಾಕಿ ಅಳುವನೆಂದೋ ಏನೋ, ನನ್ನ ಪಾಲಿಗೆ ಪೇಚಾಟದ ಪ್ರಸಂಗಗಳೇ ಬಹಳ. ಒಂದನೆಯ ಪಿರಿಯಡ್ಡು ಇದ್ದು ಕಾಲೇಜಿಗೆ ಮುಟ್ಟುವಲ್ಲಿ ತಡವಾದಾಗ ವಾಹನದ ಅನುಕೂಲತೆ ಆಗದೆ ಹೋಗುವುದು; ಚಹದ ಅಂಗಡಿಗೆ ಹೋದಾಗ ಜೇಬಿನಲ್ಲಿ ಸಾಕಷ್ಟು ಹಣ ಇಲ್ಲದಿರುವುದು; ರೇಲ್ವೆ ಸ್ಪೇಶನ್ ಮುಟ್ಟುವಷ್ಟರಲ್ಲಿ ಟ್ರೇನು ಬಿಟ್ಟಿರುವುದು; ಕ್ಷೌರಿಕರ ಸಲೊನಿಗೆ ಹೋದಾಗ ಅಲ್ಲಿರುವ ಪ್ರತೀಕ್ಷಾ ಸ್ಥಳಗಳೆಲ್ಲ ತುಂಬಿರುವುದು-ಇಂತಹ ತೀರ ಸಾಮಾನ್ಯ ಅನಾನುಕೂಲತೆಗಳೂ ನನ್ನನ್ನು ಪೇಚಿಗೆ ಈಡು ಮಾಡುತ್ತಿರುವುದುಂಟು. ಸಾಮಾನ್ಯ ತೊಂದರೆಗಳನ್ನು ಸರಿಯಾದ ಅರ್ಥದಲ್ಲಿ ಗ್ರಹಿಸಿದರೆ; ಅವೇ ಸಾಹಸೀ ಕೃತ್ಯಗಳಾಗುತ್ತವೆಂದು ಚೆಸ್ಟರಟನ್ ಹೇಳುತ್ತಾನೆ. ಆದರೆ ನನಗೆ ಹಾಗೆ ಅರ್ಥಯಿಸುವ ತಾಳ್ಮೆಯಾಗಲಿ ಸಾಮರ್ಥ್ಯವಾಗಲಿ ಇರಲಿಕ್ಕಿಲ್ಲ. ನಾನೊಬ್ಬ ಅಂಜುಗುಳಿ.
ನಾನು ಪಡುವ ಪೇಚಾಟದ ಪ್ರಸಂಗಗಳು ಬೇರೆ ಬೇರೆ ಇರಬಹುದು. ಆದರೆ ಈ ಎಲ್ಲ ಪ್ರಸಂಗಗಳಲ್ಲಿ ಒಂದೇ ತರದ ಅನುಭವ ನನಗಾಗುತ್ತಿರುತ್ತದೆ. ‘ನಾನೆಷ್ಟು ಅಲ್ಪನೋ’ ಎಂದು ಭೂಮಿಗಿಳಿಯುವಂತಾಗುತ್ತದೆ; ಎದೆ ಡವಡವಿಸುತ್ತದೆ. ಮೈಯಲ್ಲೆಲ್ಲ ಬೆವರು ಇಳಿಯುತ್ತಿರುತ್ತದೆ. ಬಾಯೊಳಗಿನ ನಾಲಗೆ ಒಣಗಿರುತ್ತದೆ. ಮುಖ ನಿಸ್ತೇಜವಾಗಿರುತ್ತದೆ. ಹೀಗೆ ಆಗಬಾರದು-ಎಂದು ಇಲ್ಲದ ಧೈರ್ಯ ತಂದುಕೊಂಡರೂ ಈ ಪೇಚಾಟದ ಜಂಜಾಟದಿಂದ ಪಾರು ಮಾತ್ರ ಆಗಿಲ್ಲ. ಅಪರಿಚಿತರೊಂದಿಗೆ ಸಲಿಗೆಯಿಂದ ಮಾತನಾಡುವದೊತ್ತಟ್ಟಿಗಿರಲಿ, ಅವರೊಂದಿಗೆ ತಲೆಯೆತ್ತಿ ನಿಲ್ಲುವುದಕ್ಕೂ ಸಂಕೋಚವೇ? ಹಾಗೆ ತಲೆಯೆತ್ತಿಯಾಗಲಿ, ಸಲಿಗೆಯಿಂದಾಗಲಿ ಮಾತಾಡುತ್ತಿರುವ ಜನರನ್ನು ಕಂಡಾಗ, ಅವರಲ್ಲಿರುವ ಯಾವುದೋ ಒಂದು ವಿಶೇಷ ಗುಣ ನನ್ನಲ್ಲಿ ಇಲ್ಲವೆಂದು ನನ್ನನ್ನು ನಾನು ಹೀಗಳೆಯುತ್ತೇನೆ.
ಮೊದಲೇ ಹೇಳಿಬಿಟ್ಟಿದ್ದೇನೆ- ಅಪರಿಚಿತರೊಂದಿಗೆ ನಾನು ಬಹು ಸಂಕೋಚದಿಂದ ನಡೆದುಕೊಳ್ಳುತ್ತೇನೆಂದು. ಪರಿಚಿತರೆಂದರೆ ಆ ಮಾತೇ ಬೇರೆ. ಮೈ ಚಳಿಬಿಟ್ಟು ಜೋರಾಗಿ ಹರಟೆಹೊಡೆಯಬಹುದು. ಆದರೆ ಈ ವ್ಯಾವಹಾರಿಕರೊಂದಿಗೆ ವ್ಯವಹರಿಸುವಾಗ ಮಾತ್ರ ಅವರು ಪರಿಚಿತರಿರಲಿ, ಅಪರಿಚಿತರಿರಲಿ-ನಾನು ನನ್ನ ಕಾರ್ಯವನ್ನು ಸರಿಯಾಗಿ ಮಾಡುವದಿಲ್ಲವೆಂದೇ ನನ್ನ ತಿಳುವಳಿಕೆ. ಕಾಯಿಪಲ್ಲೆಯ ಮಾರ್ಕೆಟ್ಟಿಗೆ ಹೋಗಲಿ, ಅರಿವೆ ಅಂಗಡಿಗೆ ಹೋಗಲಿ-ನನ್ನ ಮೋರೆ ನೋಡಿ ಪೂರ್ತಿ ಟೊಪ್ಪಿಗೆ ಹಾಕಿಯೇ ಕಳಿಸುತ್ತಾರೆಂದು ನನಗನಿಸುತ್ತದೆ. ನನ್ನ ಅಶಕ್ತತೆಯ ಅರಿವು ಅವರಿಗೆ ಆಗಿರಲಿಕ್ಕಿಲ್ಲವಷ್ಟೇ? ವ್ಯಾಪಾರಸ್ಥರು ಮೊದಲಿಗೆ ಗಿರಾಕಿಯನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಗಿರಾಕಿಯು ಅನನುಭವಿ ಅಥವಾ ವ್ಯವಹಾರ ತಿಳಿಯದವ ಎಂದು ಅವರು ನಿರ್ಣಯಕ್ಕೆ ಬರಲು, ವೇಳೆಯೇನೂ ಬಹಳ ಹಿಡಿಯುವುದಿಲ್ಲ. ಮುಖವೇ ಸಾರಿಸಾರಿ ಹೇಳುತ್ತದೆ-‘ನಾನು ಇಷ್ಟರವನೇ’ ಎಂದು. ನಾನಂತೂ ವ್ಯಾಪಾರಿಗಳು ಕೊಟ್ಟ ವಸ್ತುವನ್ನು ಅವರು ಕೇಳಿದ ಬೆಲೆಗೇ ಮೂಕನಾಗಿ ತಕ್ಕೊಂಡು ಅಂಗಡಿಯಿಂದ ಹೊರಬಿದ್ದು ದೂರದೂರ ಸಾಗುತ್ತೇನೆ. ಅವರ ಕೂಡ ದೀರ್ಘವಾಗಿ ಚರ್ಚೆ ಮಾಡಿದಾಗ ನನ್ನ ದಡ್ಡತನದ ಪ್ರದರ್ಶನವೇ ಆಗುತ್ತದೆ.
ಬಟ್ಟೆಯ ಅಂಗಡಿಗಂತೂ ಮೇಲಿಂದ ಮೇಲೆ ಹೋಗಬೇಕಾಗುತ್ತದೆ. ಆ ಮುಗುಳು ನಗೆ, ಜೋಡಿಸಿದ ಕೈ, ತೆರವು ಮಾಡಿದ ದಿಂಬ ಸ್ವಾಗತವನ್ನೇನೂ ಮಾಡುತ್ತವೆ. “ಏನು ಬೇಕಾಗಿತ್ತು ಸಾಹೇಬರಿಗೆ” ಎನ್ನುವ ಗೌರವಸೂಚಕ ವಾಕ್ಯವೂ ಸಾಕಷ್ಟು ಸುಖಕರವಾಗಿರುತ್ತದೆ ಕಿವಿಗೆ. ತಂಪಾದ ಗಾಳಿಯೂ ಸೂಸುತ್ತಿರುತ್ತದೆ. ಫ್ಯಾನೂ ಸೇವೆಗೆ ಸಿದ್ದವಾಗಿರುವುದರಿಂದ, ಬೇಸಿಗೆಯಿದ್ದರೆ ತಂಪನ್ನ ಪಾನೀಯವೂ ಬಂದರೆ ಆಶ್ಚರ್ಯವಿಲ್ಲ. ನಾನು ಕೇಳಿದ ಒಂದು ಅರಿವೆ ತುಣುಕಿಗಾಗಿ, ಅರಿವೆಯ ಗುಡ್ಡವನ್ನೇ ನನ್ನ ಮುಂದೆ ಒಟ್ಟುತ್ತಾರೆ. ಅದನ್ನು ಕಂಡು ನನಗೆ ಕುತ್ತುಸಿರು ಬಿಡುವಂತಾಗುತ್ತದೆ. ಇಷ್ಟೊಂದು ಅರಿವೆ ತೆಗೆಯಿಸಲು ಕಾರಣನಾಗಿ, ಕೊಂಡುಕೊಳ್ಳದೆ ಬಿಟ್ಟುಹೋಗುವುದು ಸಂಸ್ಕೃತಿಯ ಲಕ್ಷಣವಲ್ಲ-ಎಂದು ಮನಸ್ಸು ಹೇಳುತ್ತದೆ. ಆಯಿತು, ಯಾವುದೋ ಬಟ್ಟೆಯನ್ನು, ಅದೆಷ್ಟೋ ಬೆಲೆಗೆ ತೆಗೆದುಕೊಂಡು ಹೊರಬಂದಾಗ, ಜೀಲಿನಿಂದ ಹೊರಬಿದ್ದ ಅಪರಾಧಿಯ ಸ್ಥಿತಿಯೇ ನನಗುಂಟಾಗುತ್ತದೆ. ಅದನ್ನಿಷ್ಟು ಸಿಂಪಿಗ ಮಹಾಶಯನ ಮುಂದೆ ಒಯ್ದು ಇಟ್ಟು, ಅವನು ಹೊರಳೆಂದಾಗ ಹೊರಳಿ, ಸೆಟೆದು ನಿಲ್ಲೆಂದಾಗ ಸೆಟೆದು ನಿಂತು ಅಳತೆತೊಟ್ಟು ಹೊರಬಂದಾಗ ಕೆಲಸ ಮುಗಿಯುತ್ತದೆ. ಇನ್ನು ಹೊಸ ಬಟ್ಟೆ ಧರಿಸಿದಾಗ ಗೆಳೆಯರ ಚುಚ್ಚುಮಾತುಗಳು ಸಿದ್ಧವಾಗಿಯೇ ಇರುತ್ತವೆ. “ಏನ್ರೀ ಈ ಕೋಟು ಯಾವ ಮಾಡೆಲ್ಲು? ಅಮೇರಿಕಾ ಮಾಡೆಲ್ಲೋ?” (ಅಸ್ವಾಭಾವಿಕವಾದುದೆಲ್ಲ ಅಮೇರಿಕಾ ಮಾಡೆಲ್ಲು.) ಇನ್ನೊಮ್ಮೆ ಕರಿ ಸೂಟೊಂದನ್ನು ಹೊಲಿಸಿದಾಗ-“ಏನ್ರಿ ಮಹಾಶಯರೇ! ಏನಿದರ ಬಣ್ಣ? ಇದೆಂಥ ಆಯ್ಕೆ ನಿಮ್ಮದು? ರೇಲ್ವೇ ಸ್ಟೇಶನ್ ಮಾಸ್ತರರ ಸೂಟಾಗಿದೆಯಲ್ಲ!” ಧನ್ಯನಾದೆ. ಸ್ಟೇಶನ್ ಮಾಸ್ತರ್ ಅಂದರು, ಬದುಕಿದೆ. ಅದೇ ರೇಲ್ವೆ ಪೋರ್ಟರು ಅಂದಿದ್ದರೆ, ನನ್ನ ಗತಿ ಏನಾಗಬಹುದಾಗಿತ್ತೋ?
ಕ್ಷೌರಿಕನಲ್ಲಿ ಕಡ್ಡಾಯವಾಗಿ ತಿಂಗಳಿಗೋ, ಹದಿನೈದು ದಿನಕ್ಕೋ ಒಮ್ಮೆ ಹೋಗುವ ರೂಢಿ. ಕೆಲವೊಂದು ಸಾರೆ ಗೆಳೆಯರು ಸೂಚಿಸಿದಾಗಲೇ ನನ್ನ ಸವಾರಿಯು ಕ್ಷೌರಿಕರ ಅಂಗಡಿಯತ್ತ ಸಾಗುತ್ತಿರುವುದುಂಟು. ಅವರು ಕೂಡ ನನ್ನನ್ನು ವ್ಯವಹಾರಶೂನ್ಯ ಎಂದು ತಿಳಿದುಕೊಂಡಾಗ ನನ್ನೆದೆಗೆ ಬರ್ಜಿಯಿಂದ ತಿವಿದಂತಾಗುತ್ತದೆ. ನನ್ನ ಗೆಳೆಯರ ಜೊತೆಗೆ ಸಲೀಸಾಗಿ ಮಾತಾಡುವ ನಾಪಿತಮಹಾಶಯನು ನನ್ನ ಜೊತೆಗೆ ಪಿಟ್ಟೆಂದು ಮಾತಾಡುವದಿಲ್ಲ. ಯಾವ ರೀತಿ ಕೂದಲು ಕತ್ತರಿಸಲಿ-ಎಂದು ನನ್ನನ್ನು ಅವರು ಕೇಳುವುದೇ ಇಲ್ಲ. ಕ್ಷೌರಿಕರು ಅಳತೆಗೆಟ್ಟು ಮಾತಾಡುತ್ತಾರೆಂದು ಜನರು ಹೇಳುತ್ತಿರುವುದುಂಟು. ಆದರೆ ಅದು ನನ್ನ ಮಟ್ಟಿಗೆ ಸುಳ್ಳಾಗಿ ಪರಿಣಮಿಸಿದೆ. ಮೌನವಾಗಿ ನನ್ನ ಕೂದಲನ್ನು ಕತ್ತರಿಸಿ-‘ಹೂಂ, ಏಳಿರಿನ್ನು’ ಎಂದು ನುಡಿದಾಗಲೇ ನನ್ನ ಧ್ಯಾನಾವಸ್ತೆಗೆ ಮುಕ್ತಾಯ. ಕೂದಲನ್ನೆಲ್ಲ ಕತ್ತರಿಸಿ ಹಾಕುವನೋ ಇಲ್ಲವೆ, ಎಲ್ಲವನ್ನೂ ಇದ್ದಕ್ಕಿದ್ದ ಹಾಗೆ ಉಳಿಸಿಯೇ ಬಿಡುವನೋ-ಇದೇ ನನ್ನ ಧ್ಯಾನದ ಸಾಮಗ್ರಿ. ಮುಂದಿರುವ ಕನ್ನಡಿಯಲ್ಲಿ ನನ್ನ ಮುಖವನ್ನು ನಾನು ನೋಡಿಕೊಳ್ಳುವ ಸಂಭ್ರಮದಲ್ಲಿ ಗೋಣು ಹಿಂದೆಯೋ ಮುಂದೆಯೋ ಸರಿದಿರುವ ಸಂಭವವೂ ಇರುತ್ತದೆ. ಆಗ ಸರಿಯಾಗಿ ಕುಳಿತುಕೊಳ್ಳಲು ಬಾಯಲ್ಲಿ ಹೇಳದೆ ಜಬರದಸ್ತಿಯಿಂದ ತಿವಿದು ಸರಿಯಾಗಿ ಕುಳ್ಳರಿಸುವದುಂಟು. ಈ ಸಮಾರಂಭ ಮುಗಿದ ಬಳಿಕ ಹಿಂದೆ ನಿಂತು ಕನ್ನಡಿ ತೋರಿಸುತ್ತಿರುವದುಂಟು. ಆದರೆ ನನಗೆ ಮಾತ್ರ ಇನ್ನೂವರೆಗೆ ಯಾವ ಕ್ಷೌರಿಕನೂ ಹಾಗೆ ಕನ್ನಡಿಯನ್ನೇ ತೋರಿಸಿಲ್ಲ. ನನ್ನನ್ನು ಏನೆಂದು ತಿಳಕೊಂಡಿರುವನೋ ಏನೋ. ಕನ್ನಡಿ ಹಿಡಿದು ತೋರಿಸೆಂದು ನಾನೇ ಬಾಯಲ್ಲಿ ಹೇಳುವದು ನನ್ನ ಒಣ ಅಭಿಮಾನಕ್ಕೆ ಕುಂದು. ಹೀಗೆ ಕೇಶಕರ್ತನಾಲಯವೂ ನನ್ನ ಪಾಲಿಗೆ ಪೇಚಾಟದ ಮಾಟದ ಮನೆಯಾಗಿಯೇ ಪರಿಣಮಿಸಿದೆ.
ನಾನೊಂದು ಸ್ವಾರಸ್ಯದ ಘಟನೆ ಹೇಳುತ್ತೇನೆ-ಒಂದು ಸಾರೆ ರವಿವಾರ-ಶುಭ ದಿನ. ನನ್ನ ನೆಚ್ಚಿನ ನಾಪಿತನಲ್ಲಿ ಹೋಗಿದ್ದೆ. ಪದ್ಧತಿಯಂತೆ ಆತನು ಕೂದಲನ್ನು ಕತ್ತರಿಸಲು ಆರಂಭಿಸಿದನು. ಅಷ್ಟರಲ್ಲಿ ಸಾಹೇಬ ವೇಷದ ಆಡಂಬರದ ವ್ಯಕ್ತಿಯೊಂದು ಪ್ರವೇಶ ಮಾಡಿತು. ಅದೇ ಕ್ಷಣದಲ್ಲಿ, ನನ್ನ ಕೂದಲು ಕತ್ತರಿಸುತ್ತಿದ್ದ ನಾಪಿತನು-ಸ್ಪಲ್ಪ ತಡೆಯಿರಿ ಸಾಹೇಬರೇ- ಎಂದು ಹೇಳಿ ಹೊರಟುಹೋದನು. ಆ ನೂತನ ಸಾಹೇಬರ ಕೂದಲು ಕತ್ತರಿಸಿಯಾದ ಬಳಿಕ ತಾಸಿನ ಮೇಲೆ ನನ್ನೆಡೆಗೆ ಬಂದನು. ಏನೂ ತಪ್ಪು ಮಾಡದವರಂತೆ ಇತ್ತು ಆತನ ರೀತಿ. ಆತನ ಮೇಲೆ ಅಧಿಕಾರ ಚಲಾಯಿಸಲಿಕ್ಕಾಗದೇ ಹೊರಬಂದುಬಿಟ್ಟೆ.
ಒಂದು ಸಾರೆ ತುಪ್ಪ ಖರೀದಿ ಮಾಡಲು ತುಪ್ಪದ ಅಂಗಡಿಗೆ ಹೋದೆ. ತುಪ್ಪ ಒಳ್ಳೆಯದೇ, ಅಲ್ಲವೇ ಎಂಬುದನ್ನು ಕೂಡಲೇ ನಿರ್ಣಯಿಸುವ ಶಕ್ತಿ ನನ್ನಲ್ಲಿದೆಯೆಂಬ ಭ್ರಾಮಕ ಕಲ್ಪನೆ ನನ್ನಲ್ಲಿತ್ತು. ಅದನ್ನು ಆ ತುಪ್ಪದ ಶೆಟ್ಟಿಯೊಬ್ಬರು ಮಾತ್ರ ಸುಳ್ಳು ಮಾಡಿದರು. ‘ತುಪ್ಪ ಒಳ್ಳೆಯದೇನ್ರಿ’ ಎಂಬುದು ನನ್ನ ಮೊದಲ ಪ್ರಶ್ನೆ. “ತುಪ್ಪ ಒಳ್ಳೆಯದೆಂದೇ ಮಾರುತ್ತಿದ್ದೇವೆ. ಬೇಕಾದರೆ ಒಯ್ಯಬಹುದು. ಬೇಡವಾದರೆ ಬಿಡಬಹುದು.” ಆ ಒಂದನೇ ಉತ್ತರಕ್ಕೇನೆ ನಾನು ತಣ್ಣಗಾದೆ. ಒಂದು ರೂಪಾಯಿಯ ತುಪ್ಪ ಕೊಡಲು ಕೇಳಿದೆ. ನಾನು ಒಯ್ದದ್ದು ಪ್ಲಾಸ್ಟಿಕ್ಕಿನ ಡಬ್ಬಿ. “ನೋಡ್ರಿ ಜನ ಫ್ಯಾಶನ್ನು ಮಾಡುತ್ತಾರೆ. ಅದಕ್ಕೆಂದೇ ಕಾಲಕಾಲಕ್ಕೆ ಮಳೆಯಾಗುವುದಿಲ್ಲ; ಬೆಳೆ ಬರುವುದಿಲ್ಲ….” ತುಪ್ಪದ ಮಾಲೀಕರ ಸುದೀರ್ಫ ಭಾಷಣ ಮುಂದುವರಿಯಿತು- “ಶೆಟ್ಟರೇ, ಈ ತುಪ್ಪದಲ್ಲಿ ಏನು ಮಿಶ್ರ ಮಾಡಿದ್ದೀರಿ?… ಏನೋ ಒಂದು ನಮೂನೆಯ ವಾಸನೆಯಿದೆ.”
ಶೆಟ್ಟಿ ಸಿಟ್ಟು ಬೆಂಕಿಯಾದನು. ಅವನ ಸಿಟ್ಟಿಗೆ, ಹೆರೆತು ಗಟ್ಟಿಯಾದ ತುಪ್ಪ ಕರಗಿತು. “ನಾವು ಒಳ್ಳೆಯವರ್ರೀ. ಒಳ್ಳೆಯವರಿಗೆ ಈಗ ಕಾಲವಿಲ್ಲರೀ. ಒಳ್ಳೆಯ ಎಣ್ಣೆ ಸಿಗದ ಈಗಿನ ದಿನಮಾನಗಳಲ್ಲಿ ಒಳ್ಳೆಯ ತುಪ್ಪ ಬೇಡುತ್ತಾರೆ. ನಮ್ಮಲ್ಲಿ ತುಪ್ಪವಿಲ್ಲ. ಹೋಗಿರಿ” ಎಂದು ಬೆದರಿಸಿದರು. ನಾನು ತಪ್ಪಾಯಿತು ಎಂದು ಗಲ್ಲ ಗಲ್ಲ ಬಡಕೊಂಡಾಗ ಮಾತ್ರ ತುಪ್ಪದ ಪಾತ್ರೆ ನನ್ನ ಕೈಯಲ್ಲಿ ಬಂತು. ಇಂತಹ ಪ್ರಸಂಗಗಳಿಗೇನು ಕಡಿಮೆಯಿಲ್ಲ.
ನನ್ನ ಮುಖಲಕ್ಷಣವೇ ವ್ಯಾಪಾರಸ್ಥರಿಗೆ ಸ್ಪೂರ್ತಿಯನ್ನು ಒದಗಿಸುತ್ತಿರುವಂತೆ ತೋರುತ್ತದೆ. ಅದಕ್ಕೆಂದೇ ತೀರ ಮೂಕನಂತಿದ್ದ ವ್ಯಾಪಾರಿ ಸಹ ವಾಚಾಳಿಯಾಗಿ ಮಾರ್ಪಡುತ್ತಾನೆ; ಕವಿಯೂ ಆಗುತ್ತಾನೆ. ಈ ಅನುಭವವೂ ಬಂದಿಗೆ ನನಗೆ ಬಹಳ ಸಾರೆ.
ಮನೆಯ ಉಪಯೋಗಕ್ಕೆಂದು ಕಟ್ಟಿಗೆ ತರಲು ಹೋಗಿದ್ದೆ. ಆರು ಫೂಟು ಎತ್ತರದ ಘನವಾದ ದೇಹಾಕೃತಿಯುಳ್ಳ ವ್ಯಕ್ತಿಯು ನನ್ನನ್ನು ಸ್ವಾಗತಿಸಿತು. “ಇವನನ್ನು ಸುಡಲು ಏನಿಲ್ಲವೆಂದರೂ ಇಲ್ಲಿಯ ಕಟ್ಟಗೆಯಂತೂ ಸಾಕಾಗದು” ಎಂದು ಅದೇಕೋ ನಾನು ತರ್ಕಿಸಿದೆನು.
“ನಮಗೆ ಒಣಗು ಕಟ್ಟಿಗೆ ಬೇಕು.”
“ಒಣಗು ಕಟ್ಟಿಗೆ ಮಾತ್ರ ನಮ್ಮಲ್ಲಿ ಸಿಗುವದು” ಎಂದು ಮುಖ ಸಿಂಡರಿಸಿಹೇಳಿದನು.
“ತೂಕ ಸರಿಯೊಗಿದೆ ಏನ್ರೀ”-ಎಂದು ಹೆದರಿಕೆಯಲ್ಲಿ ಪಿಸುನುಡಿಯತ್ತ “ಬಂಗಾರ ತೂಗಿದಂತೆ ನಿಮ್ಮ ತೂಕದ ರೀತಿ”-ಎಂದು ಗಟ್ಟಿಯಾಗಿ ಅಂದೆ.
“ಏನಂತೀರಿ? ಹೀಗೆ ಬಂಗಾರ ತೂಗಿದರೆ ಮನೆ ಮಠ ಮಾರಬೇಕಾಗುತ್ತದೆ” ಎಂದು ಕೋಪಾವೇಶದಿಂದ ಉತ್ತರಿಸಿದನು.
ಅವನ ಕೋಪವನ್ನು ತುಸು ಶಮನ ಮಾಡಬೇಕೆಂದೂ ನನ್ನ ಪರಿಚಯವೊಂದಿಷ್ಟು ಇವನಿಗಾಗಲಿ ಎಂದೂ ನನ್ನ ಬಡಾಯಿ ಕೊಚ್ಚಿಕೊಂಡೆ. “ನಾನು ಕಾಲೇಜಿನಲ್ಲಿಯೇ ಕೆಲಸ ಮಾಡುತ್ತೇನೆ. ನಿಮ್ಮ ಮಗನೊಬ್ಬ ನನ್ನ ವಿದ್ಯಾರ್ಥಿಯಾಗಿದ್ದಾನೆ.”
“ನಾನು ಒಪ್ಪಲಾರೆ” ಎಂಬುದು ಕಟ್ಟಿಗೆಯ ಮಾಲಿಕನ ಉತ್ತರವಾಗಿತ್ತು.
ನಾನು ಥರಥರ ನಡುಗಿದೆ. “ಏಕೆ” ಎಂದು ಅಂಜುತ್ತಲೇ ಕೇಳಿದೆ. “ಎರಡನೆಯವರ ಮೇಲೆ ವಿಶ್ವಾಸವಿಡದ ನೀವು ಹುಡುಗರಿಗೇನು ಕಲಿಸುತ್ತೀರಿ?”
ಎಂದು, ನನ್ನ ಮುಖಕ್ಕಿಷ್ಟು ಮಂಗಳಾರತಿ ಮಾಡಿ-“ನನ್ನ ಮಗ ಇದ್ದಾನಲ್ರೀ, ನಿಮ್ಮ ವಿದ್ಯಾರ್ಥಿ. ಅವನು ಒಂದೇ ಸಲ ಸುಳ್ಳು ಮಾತಾಡಿದರೆ ನಮ್ಮಲ್ಲಿ ಆತನಿಗೆ ಊಟವೇ ಇಲ್ಲ.”
ಈ ಆಧುನಿಕ ಸತ್ಯಸಂಧ ಹರಿಶ್ಚಂದ್ರನನ್ನು ಮನಸಾ ಅಭಿವಂದಿಸಿ, ಕಟ್ಟಿಗೆಯ ಅಡ್ಡೆಯಿಂದ ಈ ಕಡಗೆ ಧಾವಿಸಿದೆ.
ಸಾಮಾನ್ಯರಲ್ಲಿ ತೀರ ಸಾಮಾನ್ಯನಾಗಿರುವ ಹೋಟೇಲ ಮಾಣಿಯೂ ನನ್ನೂಡನೆ ಈ ರೀತಿ ಮಾತಾಡಬೇಕೇ? ಒಂದು ಸಾರೆ ರಾತ್ರಿ ಗೆಳೆಯನೊಂದಿಗೆ ಸಿನೆಮಾಗೃಹದಿಂದ ರೂಮಿಗೆ ಮರಳಿ ಬರುತ್ತಿದ್ದೆ. ನಿತ್ಯವೂ ಊಟ ಮಾಡುತ್ತಿರುವ ಹಾಟೀಲಿಗೆ ಹೋದೆವು. ಪುಣ್ಯಕ್ಕೆ ಅಂದು ಸೋಮವಾರ (ಶಾಸ್ತ್ರೀವಾರ)ದ ನಿರಾಹಾರದ ತೊಂದರೆಯಿರಲಿಲ್ಲ. ತಾಟಿನ ಮುಂದೆ ಕುಳಿತೆವು. ಚಪಾತಿ-ಎಂದು ಕರೆಯಬಹುದಾದ ವಸ್ತುವನ್ನು ಆ ಮಾಣಿ ಜೋರಾಗಿ ಒಗೆದನು. ಕಣ್ಣಲ್ಲಿ ಧೂಳು, ತಾಟಿನಲ್ಲಿ ಬೂದಿ-“ಏನಯ್ಯ, ಒಂದ ಬಿಸಿ ಚಪಾತಿಯನ್ನು ಕೊಡಬಹುದೇ” ಎಂದು ದೈನ್ಯವಾಗಿ ಕೇಳಿದೆ. ಎಷ್ಟಾದರೂ ಆತನು ನಮ್ಮಂಥವರ ಅನ್ನದಾತನಲ್ಲವೇ?
ತಾಟಿನೊಳಗಿನ ಚಪಾತಿಯನ್ನು ತೋರಿಸುತ್ತ-“ಇಂಥ ಚಪಾತಿ ಸಿಕ್ಕಿದ್ದೇ ನಿಮ್ಮ ಪುಣ್ಯ. ನಮ್ಮ ಅನುಗ್ರಹ. ಅಂಥದರಲ್ಲಿ ಬಿಸಿ ಬೇಕಂತೆ. ಬಿಸಿ ಚಪಾತಿ ಸಿಗಲು ಇದೇನು ಮನೆಯೇ?” ಎಂದು ಕೇಳಿದನು.
ನನಗೆ ಮುಂದೆ ಮಾತಾಡಲು ಧೈರ್ಯವು ಸಾಲಲಿಲ್ಲ. ಗಂಟಲಿನಲ್ಲಿ ತುತ್ತೂ ಸಿಕ್ಕತೊಡಗಿತು. ತಾಟನ್ನು ಬಿಟ್ಟು ಎದ್ದು ಹೊರಟೆ.
ತೀರ ಸಾಮಾನ್ಯ ಘಟನೆಯೂ ನನ್ನಂಥ ಅಂಜುಗುಳಿಯನ್ನು ಪೇಚಾಟಕ್ಕೆ ಗುರಿಪಡಿಸುತ್ತಿರುತ್ತದೆ. ಇಂಥ ಪ್ರಸಂಗ ಬಂದಾಗಲೆಲ್ಲ ನಕ್ಕು ಮುಂದೆ ಸಾಗುವನೇ ಜಾಣ; ಮನಸ್ಸಿಗೆ ಹಚ್ಚಿಕೊಂಡು ನರಳುತ್ತಿರುವವನೇ ಕೋಣನಲ್ಲದೆ ಮತ್ತೇನೂ ಅಲ್ಲ. ಇದು ನಾನು ದೀರ್ಘ ಅನುಭವದಿಂದ ಕಲಿತ ಸಿದ್ಧಾಂತ.
*****