ಕರಿ ಎರಿ ಹೊಲದಲ್ಲಿ ಘಮ್ಮೆಂದು
ಕೆಂಪು ಹಾಯ್ದ ಬಳಿಜೋಳದ ತೆನೆ
ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ
ಕೊಂಡ ಅನವು ಹೆಚ್ಚಾಗಿ ಹರಡಿತು
ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ.
ಮಾಗಿದ ಚಳಿಯ ಪದರಲಿ
ಸೋಸಿ ಸೂಸಿದ ಚಿಗುರ ಗಂಧಗಾಳಿ
ತೂರಿ ಜಿಗಿದವು ಕನಸುಗಳು
ಹೊಳೆ ಹೊಳೆದವು ಮನಸುಗಳು
ಮಾಗಿದ ಬಿಸಿಲಿನಲಿ ಕೊಡಲೆ ಹಾಸಿದವು ಕಾಳುಗಳು
ಒಡಲ ಹಸಿವಿಗೆ ತೆರೆದ ಬಯಲು
ಹಿಟ್ಟು ನಾದಿನಾದಿ ನಿಗಿ ನಿಗಿ ಸುಡುವ
ಬೆಂಕಿಯ ಮೇಲೆ ಹಂಚು ರಾಯ್ದು
ತಟ್ಟಿ ಏರಿಸಿದ ಎದೆಯ ಹದದ ರೊಟ್ಟಿ
ಕಳಚಿಕೊಂಡ ಎಲ್ಲಾ ಗುಡ್ಡೆಗಳ ಮೌನ ಕಂಪನಗಳು
ಹಸಿವಿಗೆ ಹಸಿರು, ನೀರು ಹಸಿರಿಗೆ,
ನೀರಿಗೆ ಮೋಡ, ಭವಕಂಪನ ಮೋಡಕೆ,
ಭೂಮಿಯ ಸೀಳುವ ಚಿಗುರ ಚೈತನ್ಯ,
ಸಣ್ಣ ಬೆಂಕಿಯಲಿ ಅರಳುವ ಅನಂತ ಮೌನ.
ಒಡೆಯದೇ ತಡೆಯದೇ ಹರಡಿದ ಬದುಕು.
*****