ನಮ್ಮ ನಡುವಿನ ಮಾತುಗಳೆಲ್ಲಾ
ಮಾತಲ್ಲ ಗೆಳೆಯಾ ಅಲ್ಲಿರುವುದು
ಮೌನದ ಪ್ರತಿಬಿಂಬ, ನದಿಯಲಿ
ತೇಲುವ ದೋಣಿಯ ಗೆಣೆನಾದ
ನೀಲಿ ಆಗಸದ ತೇಲುಚುಕ್ಕಿಗಳ ಬಿಂಬ
ಮೆಲ್ಲಗೆ ಅರಳಿಸುತ್ತದೆ ಸೂರ್ಯಕಾಂತಿ
ಕಣ್ಣಕಾಂತಿ, ತೊಟ್ಟಿಲಲಿ ಮುದ್ದು ಕಂದನ ಕೇಕೆ
ನಮ್ಮ ನಡುವಿನ ಮೌನ ಬರೀ
ಮೌನವಲ್ಲ ಗೆಳೆಯ ಅಲ್ಲಿರುವುದು
ಮಾತಿನ ಬಿಂಬ, ಗೂಡಿನಲಿ ಗುಬ್ಬಚ್ಚಿ ಚಿಲಿಪಿಲಿ,
ಹರಿಯುವ ಮುಂಜಾನೆ ಬೆಳಗು ಫಳಫಳ,
ನದಿಯ ಕಲರವ ಮೆತ್ತಗೆ ತೊಯ್ಯುತ್ತದೆ ಪ್ರೀತಿ
ಎದೆಯ ಸೊನೆಹಾಲು ನನ್ನೊಳಗೆ ನೀ ಸಾಕ್ಷಿ.
ನಮ್ಮ ನಡುವಿನ ಮಾತು ಮೌನ
ಗೂಡು ಮಾಡಿನಲಿ ರಾಗಭೋಗದ
ನೆಂಟು ಈಗ ಅಲ್ಲಿರುವುದು ಬರೀ ಕಲ್ಲುಗೋಡೆಗಳಲ್ಲಾ
ಅದು ಅಲ್ಲಮನೆ ಗುಹೆ
ಚಿಕ್ಕಮಿನುಗಲಿ ಮೋಡತೇಲಿ ನದಿಹರಿದು
ಕಡಲ ಒಡಲ ಸೇರಿದ ಹರವಿನ ದಾಂಪತ್ಯ
ಭವ ಅಂಗೈಯಲಿ ಲಿಂಗವಾಗುವ ಜೀವಭಾವ.
ನಮ್ಮ ನಡುವಿನ ನೇಯ್ಗೆ ಬರೀ
ಬಟ್ಟೆಯಲ್ಲ ಗೆಳೆಯ ರಾಗರಂಗುಗಳು ಸೇರಿ
ಬಚ್ಚಿಟ್ಟ ಬಣ್ಣದ ತುಣುಕುಗಳು ಪ್ರೀತಿ
ವಿಶ್ವಾಸದ ಸೂಜಿದಾರದಲಿ ಪೋಣಿಸಿ
ಒಂದೇ ಜಾಡಿನಲಿ ಹೊಲೆದ ಹಸನಾದ ಕೌದಿ.