ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ
ಕಾಮಶಾಸ್ತ್ರ ಯಾವಲ್ಲಿತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು
ಭೂಮಿಯೊಳಗ ಆತಿ ಕೌತುಕವಾಯಿತು
ಆ ಮಹಾದೇವರು ಬ್ಯಾಸತ್ತು
ನೇಮ ಹಿಡಿದು ಆ ಹೇಮಕೂಟದಲಿ
ತಾನು ರಹಿತ ಒಂಭತ್ತು ಹೇಮಕೂಟದಲಿ
ಉತ್ಕರಿಸುತ ನದಿ ಭೀಮನಾಂಗ ನೋಡಿ ಬಂದಿತು
ಕ್ಷೇಮದಿಂದ ಸಂಚಾರವು ತಿಳಿಯಲು
ಈ ಮಹಿಮೆ ಯಾರಿಗೆ ಗೊತ್ತು
||ಇಳವು||
ರತಿದೇವಿಯೆಂಬು ಐದು ಅಕ್ಷರಾ
ಮತಿಗೆಟ್ಟು ನಾನಾವಿಕಾರಾ
ಜತಿಗೂಡಿ ಮೆರೆವ ವಿಸ್ತಾರಾ
ಕ್ಷಿತಿಯೊಳಗೆ ಆತೋ ವಿಕಾರಾ
ಸತಿ ಪುರುಷರು ಇಬ್ಬರು ಜರಾ
ಪ್ರತಿಭೂಮಿ ಇರುವದು ಚಮತ್ಕಾರಾ
||ಏರು||
ವೀರ ಪುರುಷರು ವಿಧ್ವಂಸಕ ನೇತ್ರರು
ಸತಿ ಪುರುಷರು ಇಬ್ಬರು ಜತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು ||೧||
ನಾಗಲಿಂಗ ಆಲಿಂಗನ ಕೊಟ್ಟರೆ
ಈಗ ಆತು ಪದ್ಮಿನಿಗೆ ಸುಖಭೋಗ
ವಿಷಯದಾಗ ಮುಖವಿಲ್ಲದೆ ಈ
ಹಸ್ತಿನಿಕಾಲೊಳು ಆತೋ ಸುಖಾ
ಈಗ ಪುರುಷಜಾತಿಗಳು ಮೋಹಿಸಿ
ಮಾನಿನಿಯರು ನೋಡತಾರೋ ಮುಖಾ
ರೋಗ ಬಲಿದು ಏಕಾಗಿ ಅಂದದಿ
ತೆಕ್ಕಿಯೊಳಗೆ ಅಪ್ಪುವದು ಜೋಕಾ
ಸಾರಮನಸ್ಸು ಸಂಯೋಗನಿದ್ರಿ ಕುಚದಾ
ಗಿರಿಯಲಿ ಮಲಗೋದು ಠೀಕಾ
ಮ್ಯಾಗಬಿದ್ದು ಮಾತಾಡಲು ಮನ್ಮಥಾ
ದಾಗರಿಸುತ ನಗುತಿಹನ್ಯಾಕೆ
||ಇಳವು||
ಸಾಗಲಿಕ್ಕೆ ಪಶ್ಚಿಮದ ಭಾಗ
ಅಲ್ಲೇ ಇಡಬೇಕು ಕೈ ಅದರೂಳಗಾ
ಚಾಗನ ಉತ್ತರದ ಲಾಗಾ
ಇರಬೇಕು ದಕ್ಷಿಣದ ತ್ಯಾಗಾ
ಸೋಗಿತಿ ಪೂರ್ವದ ಯೋಗಾ
ತೂಗ್ಯಾಡು ಅನಕಾ ಸಂಯೋಗಾ
||ಏರು||
ಆಗ ಹಿಡಿದು ಅಧರಾಮೃತ ಸವಿಯಲು
ಶ್ರೀ ಗಿರಿಯಲಿ ಉದರಿತ ಮುತ್ತು
ಕಾಮ ಸುಟ್ಟು ಕಷ್ಟವಾಯಿತು ||೨||
ಚಿತ್ತಿನಿ ಜಾತಿಗೆ ಹಸ್ತವು ಮೇಲು
ಹತ್ತಿಪ್ಪತ್ತು ಹಿಡಿ ಹನ್ನೊಂದು ಗೆರಿ
ಹಸ್ತಿನಿ ಮುಖಮಂಡಲ ಕಪೋಲಕ
ಮಸ್ತಕದೊಳಗಿನ ನೀರ ಕೆರಿ
ಉತ್ತಮ ಪದ್ಮಿನಿ ಮತ್ತ ನೋಡಲು
ಎತ್ತಿ ಕಣ್ಣು ಕೈಬೀಸಿ ಕರಿ
ಚಿತ್ತಜನಕರ ಹಸ್ತಿನಿ ಶಂಕಿನಿ
ಮುತ್ತಿಹೊಡೆದರು ಮಾಯಮಾಡಿ
ಮುತ್ತಿಗಾಯಿತಲ್ಲಾ ಮೈಸೂರು ಸೀಮೆಗೆ
ರತ್ನ ಮೇಲೆ ಶಿಶುಪೇಚು ಗರಿ
ಕುಸ್ತಿ ಇಟ್ಟು ಕರಮಸ್ತಕ ಮುಚ್ಚಲು
ಅಳಿಸಿಹೋಯಿತು ಅತಿಲ್ಕವರಿ
||ಇಳವು||
ವಿಸ್ತರವು ಕಾಮಶಾಸ್ತ್ರದಲಿ
ಚಿತ್ತಿರಬೇಕು ಸೂರತದ ಲೀಲಿ
ಗೊತ್ತಿಟ್ಟು ಪ್ರೀತಿ ಧರ್ಮದಲಿ
ಮುತ್ತಿನ ಜ್ಯೋತಿ ರತ್ನದಲಿ
|| ಏರು||
ಸತ್ಯ ಶಿಶುನಾಳಧೀಶನ ಸೇವಕ
ಮತ್ತೆ ಹೇಳಿದ ಮಾತಿನ ಗೊತ್ತು
ಕಾಮಸುಟ್ಟು ಕಷ್ಟವಾಯಿತು
ರತಿದೇವಿಗೆ ಬಂದೀತು ಹೊತ್ತು ||೩||
*****