ನಿರಂತರ ಚಲನೆಯ ಹಾದಿ
ಬೇಸಿಗೆಯ ನಡು ಮಧ್ಯಾಹ್ನ
ಕಾಲವೇ ಏನು ನಿನ್ನ ಆಟ ಎಲ್ಲವೂ
ಆವಿಯಾಗುವ ಹೊತ್ತು ಮತ್ತೆ ಬೆವರಸ್ನಾನ.
ಕಾಲವೇ ವರ್ಷಋತುಗಳಾಗಿ
ಮುಂದೆ ಸಾಗುವ ಗುರಿ ಕಾಣದ
ಚಲನೆಯ ಆಯಾಮದಲಿ ಪಾಠ ಎಲ್ಲವೂ
ಬೆಂದು ಬಸವಳಿದು ಹಣ್ಣಾಗುವ ಮಾಗಿ.
ನಡೆಯಲು ತಾಳ್ಮೆ ಇಲ್ಲದೇ ಓಡುವ
ಕಾಲವಾಗಿ ತ್ರಿಶಂಕು ಆಟ ಪಾಠ
ನಿತ್ರಾಣದ ಮುದಿದೇಹ ಎಲ್ಲವೂ
ಮಬ್ಬಾದ ಹೆಜ್ಜೆಗಳು ಮೂಡಿದ ದಾರಿ.
ತರ್ಕಗಳ ನಡುವೆ ಅಲ್ಲೋಲ ಕಲ್ಲೋಲ
ಕಾಲದಾಟವ ಆಡಿಸಿ ಬೀಳಿಸಿ
ಬೆಂಬಿಡದೇ ಬೆಂಬತ್ತಿ ಬಿಸಿ ಹಾಯಿಸಿ ಎಲ್ಲವೂ
ಬೆಂದು ಅನ್ನವಾಗುವ ವಿಕಸನದ ಹಾದಿ.
*****