ರಶ್ಮಿ ರಥವನೇರಿ ಬರುವ
ಸೂರ್ಯ ನನ್ನಯ ಕಾಂತಿಯು,
ಬ್ರಹ್ಮ ಬೆಸೆದ ಗಂಟ ನಂಟಿನಿನಿಯ
ಜೀವನ ಸಂಗಾತಿಯು |
ಇರುಳ ಬೇಗುದಿಯ ಕಳೆವ
ಮೂಡಲೆಡೆಗೆ ಚಿತ್ತವು.
ಅಡಿಯಿಟ್ಟನೆಲೆಯ ಹದುಳತನವೆ
ಬಾಳ ಮಧುಬನ ಚೈತ್ರವು.
ಅತ್ತ ಇತ್ತ ಸುತ್ತ ಜೋಕೆಯಿಂದ
ಕಿರಣದೆಡೆಗೆ ಯಾನವು,
ಸಂಕರಗಳ ಶೂಲ ಜಾಲ ಜಾಲದಲ್ಲೂ
ನಗುವಿನೆಡೆಗೆ ಧ್ಯಾನವು,
ಅರವಿಂದನುರಿಯ ಬಿಂಕು ಮಾತಿಗೂ
ಒಲವ ಬೆಸೆಸೊ ಭೂಮಿಕೆ,
ಶಶಿಯ ತಿಂಗಳ ತಂಬೆಳಕಿನಂಗಳ
ಸುರತಿ ಸುಖಕೆ ಪೀಠಿಕೆ,
ಮಳೆ ತವರ ಮೌನಕೆ ಪ್ರಕೃತಿ ತಾಪಕೆ
ಜೀವವಾಗುತೆ ತಲ್ಲಣ,
ಮಾನಧನನ ಹಗೆಯ ಬಗೆ ಬಗೆ ಬೆಂಕಿಗೆ
ಚಿತೆಗೇರುತೆ ಹೆಣ್ಣ ಹೆಣ,
ಮಣ್ಣನೆತ್ತರು ಬಸಿದಿತ್ತು ಹೆತ್ತರು
ಹೊನ್ನ ಜಠರವೆ ನಾಶವು,
ಕವಿದ ಆಸೆಯ ಮಾಯಾ ಛಾಯೆಯು
ಎನ್ನ ಕುಲಕೆ ಮೃತ್ಯುವು.
*****