ಬಯಲಲಿ ಮಕ್ಕಳು ಹಾರಿಸಿದ
ಗಾಳಿಪಟ ಮನೆಯ ಒಳಗೆ
ಬಿದಿರು ಗೋಂದು ಬಣ್ಣದ ಹಾಳೆ ತುಂಡು.
ತಿಳಿಗಣ್ಣ ತುಂಬ ಮಿಂಚು ಸುಳಿದಾಡಿ
ಗಂಗೆ ಹರಿದಳು ಎದೆಯ ಬಯಲಲಿ.
ದಿಕ್ಕು ದಿಕ್ಕಿನ ಚಲನೆ ಬದಲಿಸಿ
ಮದು ಹದಗೊಂಡ ಮನಸ್ಸು ಬಯಲು
ಆಲಯದೊಳಗಿರಿಸಿ ಎಲ್ಲಿರುವೆ ನೀನು
ಇಲ್ಲಿ ಇರಿಸಿ ಗೋಡೆಗಳು ತೂಗಿ ಹಾಕಿದ
ಭಾವಚಿತ್ರಗಳ ನೆನಪು ಕನ್ನಡಿಯಲಿ ಪ್ರತಿಬಿಂಬ.
ಪರಿಮಳ ಹೂಸೂಸಿ ಗಾಳಿಗಂಧ
ತೇಲಿದ ಸಂಜೆ ನೆರಳು ಬೆಳಕಿನಾಟಕೆ
ಕರಗಿ ನೀರಾಗಿ ಹನಿಹನಿ ಕವಿತೆಯ ಸಾಲುಗಳು
ಭಾವ ತರಂಗದಲಿ ಹಾರುತ ಬಂದ ಚಿಟ್ಟೆಗಳು
ಹೂಗಳ ಆಯ್ದು ತಂದ ಪುಟ್ಟ ಕೈಗಳು.
ಮೊದಲು ಕಣ್ಣಿಗೆ ಕಾಡಿಗೆ ತೀಡಿದ ದೇವರ
ಮನೆದೀಪ ಬೆಳಗಿದ ಬೆಳಕು ಎಲ್ಲೆಡೆ,
ಪ್ರತಿಫಲಿಸಿ ತೂಗುವ ತೊಟ್ಟಿಲಲಿ ಮೇರುಗೀತೆ,
ಮಮತೆಯಿಂದ ರಕ್ಷಿಸಿದ ತಾಯಿ ಬೇರು
ಚಿಗುರು ಚಿಮ್ಮಿ ಸೂಸಿ ಅರಳಿದ ಮಲ್ಲಿಗೆ ಘಮಘಮ.
ಭಾವರಂಗಿನ ಪದಗಳಿಗೆ ಗಾಳಿ ಬೆಳಕು
ಮಿಂಚು ಹರಸಿ ಹಾಯ್ದ ಫಲಕುಗಳು
ಎದೆ ತೆರೆದ ಹಾಡಾಗಿ ಹೂ ಚಿಟ್ಟೆ ನಕ್ಷತ್ರಗಳರಳಿ
ಕವಿತೆ ತಂದ ಮಂತ್ರದಂಡ ಇದ್ದ ಎಲ್ಲಾ
ವಿಸ್ಮಯಗಳ ಇಂದ್ಹಾಂಗ ಅನಿಸಿ ಚೈತನ್ಯ ತಂದ ಮಾಂತ್ರಿಕ.
*****