ಪಡುವಲದೊಡೆಯ ಪೂರ್ಣಿಮೆಯಿನಿಯ
ಬೆಳಗಽನ್ನು ಸುಯ್ದಾ,
ಬೆಳ್ಳಿಯ ಬೆಳಗನ್ನು ಸುಯ್ದಾ,
ಬಾನಲಿ ಮೊಳೆದು ಮೆಲ್ಲಗೆ ಬೆಳೆದು
ಇಳೆಯಲ್ಲಾ ಕಾಣ್ದಾಽ
ಪೂರ್ಣಿ ಇಳೆಯಲ್ಲಾ ಕಾಣ್ದಾ
ಅಮೃತದ ರಸದಾ ಚಿಲುಮೆಯಿಂದಽ
ಭರಭರನೇ ಸುರಿದು
ತಾನೇ ಭರ ಭರನೇ ಸುರಿದು
ಧಗ ಧಗಿಸಿರುವ ಧರಿಣಿಗೆ ತಂಪ
ಸರ ಸರನೇ ತರುವಽ
ತಾನೇ ಸರ ಸರನೇ ತರುವಾಽ
ಗಿರಿಗಳ ಮೇಲೆ ಕಾನನದೊಳಗೆ
ಶೃಂಗಾರದ ಹಾಸು,
ಕಂಡಿತು ಶೃಂಗಾರದ ಹಾಸು,
ಹಾಸಿರುವವರಾರು ಬಾನೆತ್ತರದಿಂ
ದಿಲ್ಲಿಗೇ ತಂದುಽ
ಈಗ ಇಲ್ಲಿಗೇ ತಂಧೂಽ
ಕಾಮನೆ ಬಯಕೆಯ ಮನದಲಿ ತರುವ
ವಿರಹದ ಬೇಗೆಯನುಽ
ತನುವಲಿ ವಿರಹದ ಬೇಗೆಯನು
ಪ್ರಣಯಿಗಳಿಗೆ ಉನ್ಮಾದವ ತರುವ
ತಂಬೆಳಕಿನ ಮಾಲೆ
ಮಿಲನದ ತಂಬೆಳಕಿನ ಮಾಲೆ
ಕಾಡಿನ ಮಧ್ಯದ ಸೆರಗೊಳಗಿಂದ
ಖಗ ಮಿಗದಽ ನಲಿವುಽ
ಕೇಳಿತು ಖಗಮೃಗದಾ ನಲಿವು
ಜೀವ ಸಂಕುಲಗಳ ಚಂದದ ಉಲಿವು
ಮಧು ಚಂದ್ರದ ಹಾಡು
ಹಾಡಿತು ಮಧು ಚಂದ್ರದ ಹಾಡು |
ಕಲೆತವು ತನುವುಽ ಬೆರೆತವು ಮನವುಽ
ಮರೆಸೀತುಽ ಇರವುಽ
ಸುಖದಲಿಽ ಮರೆಸೀತು ಇರವು
ಚಂದನ ಪರಿಮಳ ಹರಡುತ ಬಂತು
ತಂಗಾಳಿಯುಽ ಜೊತೆಗೆ
ಹರ್ಷದ ತಂಗಾಳಿಯು ಜೊತೆಗೆ |
ನಾಚಿದ ನಾಚಿಕೆ ದೂರ ಸರಿಯಿತು
ರತಿ ಮನ್ಮಥರಽಮಿಲನ
ಶೃಂಗಾರದ ಶಿವ-ಶಿವೆಯರಽ ಮಿಲನ
ಪ್ರೇಮ ಜಲಧಿಯ ತೆರೆಯಬ್ಬರದಿ
ಗೇಹ-ದೇಹದ ಸಮ್ಮಿಲನ
ಮರು ಹುಟ್ಟಿನ ಜೋಗುಳ ತೋಂ… ತನನನ… |
(ವರಕವಿ ಬೇಂದ್ರೆಯವರ ಮೂಡಲ ಮನೆಯಾಽ…. ಕವಿತೆಗೆ ಗೌರವದಿಂದ)
*****