ಸಿನೇಮಗಳಲಿ ನೋಡಿದಂತೆಯೇ
ಪುಸ್ತಕಗಳಲಿ ಓದಿದಂತೆಯೇ
ಅಷ್ಟೇ ಏಕೆ ನಿನ್ನೆಯೇ
ಸ್ಟಾರ್ ಹೊಟೆಲೊಂದರಲಿ
ಆ ಗುಲಾಬಿ ಹುಡುಗಿಯರು
ಕೋಟು ತೊಟ್ಟು ಅದರ ಬಾಲ
ಕೊರಳಿಗೆ ಸುತ್ತಿಕೊಂಡಂತೆಯೇ
ಕಂಡೆ ನಾನೊಂದು ಅಚ್ಚ ಬಿಳಿಯ
ಫ್ಹರ್ ಕೋಟು
ಗಡಗಡ ಚಳಿಯ ಒಂದು ಸಂಜೆ
ಪ್ಯಾರಿಸ್ ಶಾಪಿಂಗ ಮಾಲಿನ ಗ್ಲಾಸಿನೊಳಗಿಂದ
ಒಂದು ಕೊಳ್ಳಬಹುದಾದರೆ-ಹೀಗೆ ಆಸೆ.
ಮೆಲ್ಲನೆ ಒಳನುಗ್ಗಿ ಒಂದು ಮತ್ತೊಂದು
ಇನ್ನೊಂದು ನೋಡಿದ್ದೇ ನೋಡಿದ್ದು
ಫ್ರೆಂಚ್ ಸೇಲ್ಸ್ ಮನ್ ನಗುಮೊಗದಿ
ಮಾತನಾಡಿಸುತ ಏನೇನೋ ಹೇಳುತ್ತಲೇ ಇದ್ದ
ಅವನ ಭಾಷೆ ನನಗೆ ಗೊತ್ತಿಲ್ಲ
ಇಂಗ್ಲೀಷ್ ವಿರೋಧಿ; ಕೈಸನ್ನೆ ಬಾಯಿಸನ್ನೆ
ಭಾರತೀಯರಿವರೇನು ಕೊಂಡಾರು!
ಬಹುಷಃ ಸಂಶಯ…..
ಕೇಳಿದೆ
ಯಾವ ಯಾವ ಪ್ರಾಣಿಗಳ
ತುಪ್ಪಳಗಳಿರಬೇಕಿವು
ಮುಟ್ಟಿದರೆ ನುಣುಪು ಕೈಗೆ ಕಚಗುಳಿ
ಅದೆಂಥಾ ರೇಶ್ಮೆ ಅದೆಂಥಾ ಮಕ್ಮಲ್
ಏನಿದರಬೆಲೆ ಏನದರಬೆಲೆ
ಡಾಲರ್ ರೇಟ್ ತೋರಿಸಿ
ಕ್ಯಾಲಕ್ಯೂಲೇಟರ್ದಲ್ಲಿ
ಎರಡು ಲಕ್ಷದಿಂದ ಎರಡು ಕೋಟಿವರೆಗೂ…..
ಕೇಳಿ ಬಾಯಿಮುಚ್ಚಿ
ಆ ಚಳಿಯಲ್ಲೂ ಬೆವೆತು ಬೆಪ್ಪಾದೆ.
‘ಪ್ರಾಣಿಹಿಂಸೆಗೆ ದಿಕ್ಕಾರ
ಪ್ರೀತಿ ಕರುಣೆ ಇರಲಿ’ ಬರೆದೆ
ಮಾಲಿಕನ ರಸೀದಿಪ್ಯಾಡ್ ಮೇಲೆ….
ಅರ್ಥ ಕೇಳಿ ನಕ್ಕ
ಹೀಗೆಂದರೆ ಹಾಗೆ ಹಾಗೆಂದರೆ ಹೀಗೆ
ನೀವು ಲೆಕ್ಖಾಚಾರದ ಭಾರತೀಯರೆಂದ….
ಏರ್ ಫ್ರಾನ್ಸ್ದ ಫಸ್ಟ್ ಕ್ಲಾಸ ಪ್ಯಾಸೆಂಜರ್ ನಾನೀಗ
ನಾಲ್ಕಾರು ತಾಸುಗಳು ಪುಕ್ಕಟೆಯಾಗಿ ಸಿಕ್ಕ
ಫ್ಹರ್ ಹೊದಿಕೆ ಹೊದ್ದು ಮಜ ತೆಗೆದುಕೊಂಡದ್ದು
ಎಲ್ಲವೂ ಲೆಕ್ಖಾಚಾರ
ನಕ್ಕು ಮತ್ತೆ ಸೀಟಿಗೊರಗಿದೆ.
*****