ಆಕಾಶಮಾರ್ಗದಲ್ಲಿ
ಗಾಂಧಿಹೊರಟಿದ್ದು ಕಂಡೆ
ಇದು ಡಿಸೆಂಬರ ಚಳಿಗಾಲ
ಬೆಚ್ಚಗೆ ಹೊದ್ದುಕೊಂಡು
ನಡಿಬಾರ್‍ದಾ ಹುಚ್ಚಪ್ಪಾ ಎಂದೆ
ಎಲ್ಲಿಯ ಚಳಿ ಎಲ್ಲಿಯ ಮಳೆ
ಎಲ್ಲರೆದೆ ಹೊತ್ತಿ ಉರಿಯುವಾಗ
ನನ್ನದೇನು ಬಿಡು…..
ಎನೇನೋ ಗೊಣಗುತ್ತಾ
ವಿಮಾನ ಹಿಂದಿಕ್ಕುವಂತೆ
ಬರಿಗಾಲಲ್ಲಿ ಓಡುತ್ತಲೇ ಇದ್ದ.
ಅದೇನವಸರ ಎಲ್ಲಿಗೆ ಹೊರಟಿದ್ದು? ಎಂದೆ.
ಶಾಂತಿಗಾಗಿ, ತಾಲಿಬಾನಿಗರ ಶಾಂತಿಗಾಗಿ
ಗುಡುಗಿದ, ಮೋಡಗುಡುಗಿತು
ಒದ್ದೆ ಕಣ್ಣೊಳಗೂ ಆಶಾವಾದಿ ಮುದುಕ
ಓಡುತ್ತಲೇ ಇದ್ದ.
ಆಶ್ರಮದಿಂದ ತರಲೇ ನಿನ್ನ ಕೋಲು
ಚೆಸ್ಮಾ, ಚಪ್ಪಲಿ – ಎಷ್ಟೊಂದು ಸಣ್ಣಗಾಗಿರುವಿ
ಎದೆಮೂಳೆ, ಬೆನ್ನಿಗೆಹತ್ತಿದ ಹೊಟ್ಟೆ
ಯಾಕಿದೆಲ್ಲ ನಿನಗೆ ಬೇಕು ಅಜ್ಜಾ
ನಿನ್ನ ಶಾಂತಿಮಂತ್ರ
ತಲೆಕೆಳಗಾಗಿ ದೇಶದಲ್ಲೇ ಬಿದ್ದಿದೆ
ಸಾಕು ಸಾಕಿನ್ನು-
ವಿಮಾನ ಬಾಗಿಲು ತೆರೆದು ಎಳೆದುಕೊಂಡೆ
ಬೆಚ್ಚಗೆ ಹೊದಿಸಿ ಸುಮ್ಮನೆ ಕೂಡಿಸಬೇಕೆಂದೆ
ಅಷ್ಟರಲ್ಲೇ….. ಮತ್ತೊಂದು ಬಾಗಿಲು
ತೆರೆದು ನಡೆದೇಬಿಟ್ಟ.
*****