ಕೆಳದಿ ಕೇಳೆನ್ನೊಲವಿನಾ ಗಾಥೆಯ
ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ
ಮೂಡಲದರುಣಗಿರಿ,
ಪಡುವಲದ ಶಶಿಶಿಖರ,
ಪಂಚ ಭೂತಗಳಲೆಲ್ಲ….. ನನಗೊಲಿದವನ ರೂಹು,
ಲತೆ ಲತೆಗಳಲರಲರು,
ಸುಮ ಸುಮದ ಘಮದಲ್ಲಿ,
ಸೊಗಸ ಕನಸಿನಿನಿಯನ…. ರೂಪ…. ತೇಜರಾಸಿ….
ಚಿತ್ರ-ಚಿತ್ತಾರವರಿತಂತೆ,
ಗೇಹ ಬೆಳೆ-ಬೆಳೆದಂತೆ,
ಮಾಗಿ ಮಾಗಿತು ಒಳಗೆ ಪ್ರೇಮ ಪಲ್ಲವಿಯ ಫಲವು,
ಕ್ಷಣ-ಚಣವು ಉನ್ಮಾದ,
ಆನಂದದಾನಂದ ಲೀಲೆಯಲಿ,
ಮನತುಡುಕುವೆಡೆಯಲ್ಲಿ ಮಲ್ಲಿಕಾರ್ಜುನ ನಿರವು.
ಬಯಲಿಗರ ಬನದೊಳಗೆ,
ಬಯಲಾದ ಮನದೊಳಗೆ,
ಬಯಲ ಕೈ ಹಿಡಿದೆ ನಾ ಬಾಳ ಬಂಡಿಯಲಿ
ಅನುಭವದನುಭಾವಿ
ವಚನ-ವಚನಗಳೊಲ್ಲರಿಯ
ಇನಿಯನಿನಿಯನ ನಿಜ ಭಾವಗೀತೆ ರಾಗದಲಿ.
*****