ನೀ ಮೊನ್ನೆ ಅಚಾನಕ್ಕಾಗಿ
ಪತ್ರ ಬರೆದೆ ಅದರ ತೇವ
ನನ್ನ ತೋಯಿಸಿತು ಕಣ್ಣು
ನೀರಿನ ಕೊಳವಾಯ್ತು ಮಂಕಾದೆ.
ಯಾಕೆ ಹೀಗೆ ಮೋಡದಲಿ ತೇಲಿ
ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ
ಮನೆ ಮಠ ಮನಸ್ಸನ್ನೆಲ್ಲಾ
ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ.
ಗಾಳಿ ಮಳೆ ಚಳಿ ಬಿಸಿಲಿಗೆ
ಮೈ ಮನ ಮರಗಟ್ಟಿ ಹೋಗಿ
ನಡೆದ ದಾರಿಯ ಮರೆತಿದ್ದೆ
ಒಣಧೂಳಿನ ಓಣಿ ದಾಟಿ ಓಲೆ ಬಂತು.
ಓಡಿ ಪಾರಾಗಲು ಸಾಧ್ಯವಾಗದೇ
ನಿನ್ನಕ್ಷರಗಳು ಸಿಲುಕಿ ಒದ್ದಾಡಿದೆ
ನೀ ನನ್ನ ಇಷ್ಟೊಂದು ಕ್ರೂರವಾಗಿ
ಶಿಕ್ಷಿಸಬಾರದಾಗಿತ್ತು ದಾರುಣವಾಗಿ
ಒಂದು ಸಣ್ಣ ಗಲಿಬಿಲಿ ಸಾಕು ಶಾಶ್ವತವಾದ
ಸೋಲು ಅನುಭವಿಸಲು.
*****