ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ
ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ
ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ
ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ
ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ,
ನಿನ್ನ ಕಂಡೊಡನೆನ್ನ ಮನದೆಲ್ಲ ಪೇಳುವೆನು
ಎನುವ ಕಾತರಭರಿತ ಆಸೆ ಹೃದಯದ ಸುತ್ತ
ತನ್ನ ಬಲೆ ನೇಯುತಿದೆ, ಉಳಿದೆಲ್ಲ ಮರೆತಿಹೆನು!
ನಿನ್ನ ಹುಸಿ ಮುನಿಸಿನಲಿ, ನನ್ನ ನುಡಿ ಮರೆಯಾಗಿ,
ಮೌನದಲಿ ಮನದೊಲವು ಮುದುಡಿ, ಮರುಗುತಲಿಹುದು,
ರಂಗು ರಂಗಿನ ಮೋಡ ರವಿಯು ಮುನಿಸಿನಲಿರಲು
ಮೆಲ್ಲ ಮೆಲ್ಲನೆ ದೂರ ಹಾರುವೊಲು ಹಾರುತಿದೆ,
ನನ್ನೊಡನೆ ಮುನಿಯುವರೆ ?- ಹುಚ್ಚಿ! ಬಾರೆನ್ನ ಗಿಳಿ!
ಒಲವಿನುಷ- ಹೃದಯದಲಿ ಕೂಡಿಯಾಡುವ ಹೋಳಿ!
*****