ಏಳುಲೋಕದಲೇಳು ಕಡಲಲಿ
ಏಳು ಪರ್ವತ ಬಾನಲಿ
ಏಳು ಸಾವಿರ ದೇಶದಿ,
ಸುತ್ತಿ ಹಾರ್ವುದು ನೋಡಿ ನೆಡೆವುದು
ನಿಮಿಷ ನಿಮಿಷಕೆ ಕ್ಷಣದಲಿ
ಕವಿಯ ಮನಸ್ಸದೊ ಹಾರ್ವುದು!
ಚಂದ್ರಲೋಕದ ಸುತ್ತು ತಿರುಗುತ
ಸೂರ್ಯಕಾಂತಿಯ ನೋಡಿತು!
ವಿಶ್ವಗೋಳವ ತಿರುಗಿಸಿ-
ಪಾತಾಳದಾಳಕೆ ಕೊರೆದು ನುಗ್ಗುತ
ಯಾವ ಜ್ಞಾನಿಯು ಹೇಳದ,
ವಿಶ್ವರೂಪವ ಹಾಡಿತು!
ಮೊರೆವ ತುಂಬಿಯ ತೆರದಲಿಂತಿದೊ
ಇಲ್ಲಿ ಅಲ್ಲಿ ಹಾರುತ
ಕವಿಯ ಮನಸನು ಬಾಯಲಿ,
ಗಗನದಾಡುವ ಲೋಕ ಗುಟ್ಟನು
ಕಂಡು ಹಿಡಿಯುತ ಹಾರುತ
ದೇವ ಸತ್ಯವ ಹೇಳುತ.
ಗಂಗೆ ಬಂದಾ, ಸ್ವರ್ಗ ಸೇರಿದ
ಕಾವೇರಿ ಕುಂಡಿಕೆ ಮಹಿಮೆಯ
ಯಮುನೆ ತೀರ್ಥ ಶಕ್ತಿಯ
ದೇವ ರಾಕ್ಷಸ ಸಮರ ಸರ್ವವು
ರಾಮ ರಾವಣ ರಾಜ್ಯದ
ಕೂಸು ಕೃಷ್ಣನ ಬೀರ್ಯವ
ಯಾವ ಜ್ಞಾನಿಯು ಕಂಡು ಕೇಳಿದೊ-
ಕವಿಯ ಮನಸ್ಸೊಂದಲ್ಲದೆ
ಅವನ ಲಿಖಿತವಲ್ಲದೆ,
ಕಾಳಿದಾಸನ ಕ್ಷೀರ ಸಾಮ್ಯದ
ಉಕ್ತಿ ಮರೆಯಲಿ ಎಂತು ನಾ?
ಸ್ತುತಿಸದಿರ್ಪುದು ಎಂತುವೊ?
ಸೂಜಿ ಮೊದಲಿಂ ವಿಶ್ವದಂತ್ಯಕು
ವಿಷಯ ಸರ್ವಽ ಹಾಡಿದರ್,
ಹಾಡದಿರುವುದು ಯಾವುದೊ?
ಕವಿಯ ಮನಸದು ವಿದ್ಯುತ್ ಶಕ್ತಿಯ
ಗತಿಯ ಮೀರಿದೆ-ದಾಟಿದೆ
ವಿಶ್ವಭೇಧಿಸಿ ಸಾಗಿದೆ.
ಕವಿಯೊ ತನ್ನ ಸೂಕ್ಷ್ಮವಾದದಿ
ಕ್ರಾಂತಿ ಸಾರಿದ ರಾಜ್ಯಕೆ
ಶಾಂತಿ ನೀಡಿದ ದೇಶಕೆ;
ಜಗದ ಎಲ್ಲಾ ಅಲ್ಲಸಲ್ಲದ
ವ್ಯಾಜ್ಯ ಸಮರಕೆ ಮೂಲವೊ
ಕವಿಯ ನಿರ್ಭಯ ಮನಸ್ಸದೊ!
ಮಧುವ ಜಿಹ್ವೆಯಲಿಟ್ಟ ತೆರದಲಿ
ದೇವ ಕವಿಗಳ ಹಾಡದು,
ಗಾನರಸದಲಿ ತೇಲಿಸಿ,
ಜ್ಞಾನ ಶಕ್ತಿಯ ವಿಶ್ವ ಗುಟ್ಟನು
ಎರಡು ಕೈಯಿಂ ತಟ್ಟುತ
ಪೇಳ್ವ ಹಾಡದೊ, ಆಹಹಾ!
ಮಂತ್ರ ಋಷಿಗಳ ಪ್ಲೇಟೊ ಬರೆಹವು
ಮಿಲ್ಟನ್ ಸಾರಿದ ಮಾಕತೆ,
ವೇದ ಮಂತ್ರವು ಕವಿಮತ;
ವಾಲ್ಮೀಕಿ ಹೋಮರ್ ಗಯಟೆ ವ್ಯಾಸನು
ಷೇಕ್ಸ್‌ಪೀಯರ್ ಡಾಂಟೆಯೊ
ದೇವ ಕವಿಗಳೊ ಲೋಕದಿ.
ಸೂರೆಮಾಡಿತು ಲೋಕ ಮನಸನು
ಕವಿಯ ಮಂತ್ರದ ಕ್ರಾಂತಿಯೊ
ರಂಗು ರಂಗದೊ ಚಿತ್ತಾರ-
ಕ್ಷೀರ ಶರ್ಕರಾ ಬೆರೆಸಿ ಸವಿಯುವ
ತೆರದೆ ವಾಣಿಯು-ಅಮೃತ
ಬಂದ ಮನಸ್ಸು-ಸರಸ್ವತಿ!
ಅನ್ನ ನೀರೂ ಬಿಟ್ಟು ಬಾಳ್ವೆನೊ
ಹಾಡಾನಂದವ ಪಡೆಯುವ
ಭಾಗ್ಯ ಎಂತು ನಾನ ಬಿಡುವೆನೊ?
ಬಾಳಲೀ ಕವಿ ಮಾಽತ್ಮರೆಲ್ಲ
ಚಿರಾಯುವಿಂದಲಿ ಲೋಕದಿ!
ಅಗ್ನಿಯಂತೆಯೆ ಸತ್ಯದಿ!!
*****