ಕನ್ನಡಿಯೊಳಗೇ ಅವಿತು
ಕುಳಿತು
ಬಿಂಬಕ್ಕೆ ಪಾದರಸದ ಪರದೆಯೆಳೆದು
ಪಾರದರ್ಶಕದ ಪ್ರತಿಬಿಂಬವಾಗಿ
ಕನ್ನಡಿಯಾಚೆಯ ಮೂರ್ತಬಿಂಬದ
ಅಮೂರ್ತ ಪಡಿಯಚ್ಚು
ಭೂಮಿ ಮೇಲೆಷ್ಟೋ
ಒಳಗೂ ಅಷ್ಟೇ!
ಕನ್ನಡಿಗೆ ಮುಖಾಮುಖಿಯಾದ
ಪ್ರತಿಯೊಂದು ಬಿಂಬಕ್ಕೆ
ತಕ್ಕ ಪ್ರತಿರೂಪ
ಪಾತ್ರೆಯಾಕಾರಕ್ಕೆ ತಕ್ಕ ಪಾತ್ರ
ಬದಲಿಸುವ ದ್ರವರೂಪ!
ತನ್ನತನವಿರದ ಕೈಗೊಂಬೆಗೆ
ಎಲ್ಲಿದೆ ಸ್ಥಿರ ಅಸ್ತಿತ್ವ?
ಎಲ್ಲಿದೆ ಚಿರ ವ್ಯಕ್ತಿತ್ವ?
ಕನ್ನಡಿಯೊಳಗೇ ಎಡಬಲಗಳು
ಅದಲು ಬದಲಾಗಿ
ತಕ್ಕ ಪರಿಮಾಣದ ಪಾತ್ರೆಯಿಲ್ಲದೆಯೂ
ತನ್ನ ಪಾತ್ರವರಿತ ದ್ರವ
ನಿಂತಲ್ಲೇ ಘನವಾಗುವಾಗ
ಎರವಲು ಪ್ರಕಾಶಪಡೆದ
ಶಶಿಯಂತೆ ಪೊಳ್ಳು ಪ್ರತಿಬಿಂಬವಾದರೆ ಸಾಕೆ?
ಸ್ವಯಂಪ್ರಕಾಶದಿಂದ ಬೆಳಗುವ
ಸೂರ್ಯನೆಂಬ
ಮೂರ್ತ ಬಿಂಬವಾಗಬೇಕೆ?
ಬಿಂಬಕ್ಕೆ ನೂರು ಆಯಾಮಗಳಿರಬಹುದು
ಆದರೆಲ್ಲವೂ ಹಳತೇ!
ಅವರಿವರು ನಡೆದು ಸವೆಸಿ
ಟೊಳ್ಳಾದ ದಾರಿಗೆ
ತಳಿರು ತೋರಣ ಕಟ್ಟಿ
ಅಲಂಕರಿಸಿದರೆ ಹೊಸತೆನಿಸೀತೆ?
ಬಿಂಬಕ್ಕೆ ಅಂತಸ್ಥ
ಭಾವಗಳೆನಿತೋ?
ಆದರೆ,
ಪ್ರತಿಬಿಂಬಕ್ಕೆ ಒಳಗುಗಳಿಲ್ಲದ
ತಟಸ್ಥ ಮುಖವೊಂದೇ!
*****