ಇವಳು ನನ್ನವ್ವ
ತಂಪಿಗಾಗಿ ಕಾದವಳು
ಹನಿ ಬೀಳದೆ ಒಡಲೆಲ್ಲ
ಬಿರುಕು ಬಿರುಕು
ಬರಗಾಲ ಒಳಗೂ ಹೊರಗು
ಒಲೆಯ ಒಳಗಿನ
ಬಿಸಿ ಕಾವು,
ಕಾವಿನಲಿ ಬೆಂದ
ಅವ್ವ ಹನಿಗಾಗಿ
ಮೊಗವೆತ್ತಿ ನಡುನೆತ್ತಿಯ
ಮೇಲಿನ ಕಪ್ಪು ಮೋಡಕ್ಕಾಗಿ
ಕಾಯುತ್ತಲೇ ಇರುವಳು
ಬೆಳ್ಳ ಬೆಳ್ಳನೆ
ಬಂಜೆ ಮೋಡ
ಬಸಿರಾಗಿ ಕಪ್ಪಾಗಿ
ನೀರ ಹನಿಸುವಾಗ
ಕಾಲಬುಡ ತಂಪೇರಿ
ಹಸಿರು ಅರಳುವ ಹೊತ್ತು
ನನ್ನವ್ವನಿಗಲ್ಲ ಮಳೆಯ ತಂಪು
ಇಷ್ಟಾದರೂ ಕೆರಳಲು
ಒಡಲ ಕಂಪಿಸಿ
ಬಿರಿಯಲರಿಯಳು
ನೂರು ತುತ್ತು ತಿನಿಸಿ
ಹಸಿವ ಮರೆಸ ಬಯಸಿ
ಕಾಯುತ್ತಲೇ ಇರುವಳು
ಎಲ್ಲೊ ಬಿದ್ದ ಮಳೆಯ
ಸದ್ದಿಗೆ ಪುಳಕಗೊಳ್ಳುವ ಅವ್ವ
ನೋವನ್ನೆಲ್ಲ ಹೆಪ್ಪು
ಹಾಕಿ, ಬೆಣ್ಣೆ ಕಡೆವಳು
ಬೆಣ್ಣೆ ತಿನಿಸಿ ನೋವ
ಮರೆವಳು
ಹರಕು ಮುರುಕು
ಮನೆಯ ಗೋಡೆಗೆಲ್ಲ
ಮಣ್ಣ ಮೆತ್ತಿ ಸುಣ್ಣ
ಬಳಿವಳು, ಸುಣ್ಣ
ಮೆದ್ದ ಗೋಡೆಯೆಲ್ಲ
ಅವ್ವನ ಮನಸ್ಸಿನಂತೆ
ಬೆಳ್ಳ ಬೆಳ್ಳಗೆ ಈಗ
*****