ಉದ್ದಕ್ಕೆ ಏಳು
ಅಡ್ಡಕ್ಕೆ ಐದು ಸರಳುಗಳ ಕಿಟಕಿಯ ಕೆಳಗೆ
ರೋಡು ಬಜಾರು ಮನೆ ಮಠ ಬಯಲು ಬಯಲು
ಆಚೆ ಸಮುದ್ರ ಏರಿಳಿತ ಕೊರೆತ ಮೊರೆತ ಈಚೆ
ಸಂತೆಗೆ ಹೋಗುವ ಹೊರೆಗಳ ಭಾರದ ಕೆಳ ಓರೆಕೋರೆ
ರೇಖೆಗಳಲ್ಲಿ ಅಸ್ತಿತ್ವಗೊಂಡು ಮೂಡಿ ಮಾಯುವ ಮುಖಗಳು
ಹರಿಯುತ್ತಿರುವ ವಸ್ತುಗಳು ಸರಿಯುತ್ತಿರುವ ಬೆಳಕುಗಳು
ವಿಸ್ತಾರಗೊಳ್ಳುವ ಸರಹದ್ದುಗಳು ಅಮೀಬ ಆಕೃತಿಗಳು ವಿಕೃತಿಗಳು
ಅಸ್ಪಷ್ಟ ಸ್ಥಿತಿಗಳ ಅಮೂರ್ತ ಒತ್ತಡಗಳು ಹೀಗೆ
ತೇಲಿ ಬರುತ್ತಿವೆ ಕಿಟಕಿಯೊಳಗೆ ಇಣಕುತ್ತಿವೆ
ಏನೊ ಅನ್ವೇಷಿಸುತ್ತವೆ ಎಡೆಬಿಡದೆ
ಅದರ ನಿರ್ದಯ ಜಡತೆ ನಿಷ್ಕ್ರಿಯಕ್ಕೆ ಅದರ
ಹೆಪ್ಪು ಥಂಡಿಗೆ ಅಲಿಪ್ತ ಮೌನಕ್ಕೆ ಕತ್ತಲೆಯ ಭಯಕ್ಕೆ
ತಟ್ಟುತ್ತಾ ಇರುತ್ತವೆ ಆಗ,
ಆ ಹೊರಗು ಒಳಕ್ಕೆ ಜರಿಯುತ್ತಿರುವಂತೆ
ಆ ಒಳಗು ಕದಡಿ ಸರಿದು ಹೊರಕ್ಕೆ ಲಯಿಸುತ್ತಿರುವಂತೆ
ಏಕಾಂತತೆ ಮತ್ತು ಸಂತೆ ಅತ್ತಿತ್ತ ಹೊಕ್ಕು ಬೆರೆತಂತೆ ಕ್ಷೆಣಗಳು
ಇಂಥ ಸ್ಥಿತ್ಯಂತರದ ಪ್ರವಾಹದಲ್ಲಿ
ಉದ್ದಕ್ಕೆ ಏಳು ಅಡ್ಡಕ್ಕೆ ಐದು
ಸರಳುಗಳ ಕಿಟಕಿ
ಆಕಾರ ಕಳಚಿ ಹಗುರಾಗುತ್ತದೆ
ಮರಳಿ ಅದೇ ಅವಸ್ಥೆಗೆ ಬರುವವರೆಗೆ
ಖಾಲಿಯಾಗುತ್ತದೆ ಆದಾಗ
ಇಲ್ಲಿ ಏನೋ ಆಯಿತು ಅನುಭವದ ಹೊರಗೆ
ಎನಿಸುತ್ತದೆ.
*****