ಈ ದೇಶ ದೇಹದ ಶಕ್ತಿ ಕುಂದುತ್ತಿದೆ
ಚೈತನ್ಯಹೀನವಾಗುತ್ತಿದೆ ರಕ್ತ ಕಡಿಮೆಯಾಗುತ್ತಿದೆ
ಯುವ ಪೀಳಿಗೆ ಪೋಲು ಪೋಲಿಗಳಾದಂತೆ
ಹಲ್ಲುಗಳು ಒಂದೊಂದೇ ನೋವು ನರಳಿ ಉದುರುತಿವೆ
ಕೋಲಾರ ಚಿನ್ನದ ಗಣಿ ಕಿರ್ಲೊಸ್ಕರ ಕಂಪನಿ
ಅಸಂಖ್ಯ ಬಟ್ಟೆ ಗಿರಣಿ ಸಿಕ್ ಇಂಡಸ್ಟ್ರೀಸ್
ಒಂದೊಂದೇ ಉದುರಿದಂತೆ
ಕೂದಲು ಬೆಳ್ಳಗಾಗುತ್ತಿದೆ ಕಪ್ಪು ಮಾಯ
ಹಚ್ಚಹರಿತ್ತಿನ ಗಿಡಮರಗಳು ಕಡಿದುರುಳಿ
ನೆಲಬಂಜೆ ಬರಡಾದಂತೆ
ಕೂದಲುದುರಿ ಬೋಳು ಬೋಳು ತಲೆ
ಐವತ್ತಕ್ಕೇ ಮುಪ್ಪಡರುತ್ತಿದೆ
ಉದ್ದೀಪನಗೊಳ್ಳಲು ಉತ್ತೇಜಕ ಮಾರ್ಗಗಳು
ಮದ್ಯ ಎಲ್‌ಎಸ್‌ಡಿ ವಿಟಾಗೋಲ್ಡ್
ಕೃತಕ ದಾರಿಗಳು ತೆರೆದಿವೆ
ನರನಾಡಿಗಳ ಮಿಡಿತ ಮಂದ
ತಗ್ಗು ಕೊರಕಲು ರಸ್ತೆಗಳಲ್ಲಿ ವಾಹನಗಳು
ಕುಕ್ಕಾತ್ತ ಏಳು ಬೀಳುತ್ತ ತೆವಳುವಂತೆ
ಎಳೆಯುತ್ತಿದೆ ಗಾಡಿ ಏದುಸಿರು ಬಿಡುತ್ತ
ತಲೆ ಜೋಲಾಡಿಸುತ್ತ ಬಡಪ್ರಾಣಿ
ದುಡಿವ ಜನ ಅರೆಹೊಟ್ಟೆಯಲ್ಲಿ
ಹೇಗೋ ಕಾಲೆಳೆದು ಬಗ್ಗಿ ಬಂಡಿ ಜಗ್ಗುವಂತೆ
ಕೀಲು ಕೀಲು ಸಡಿಲ ನೋವು
ಕುಂತರೂ ಹಾಯ್ ನಿಂತರೂ ಹಾಯ್
ವರ್ಗ ವರ್ಗಗಳು ಅಮಾನವೀಯ
ನೋವುಗಳಲ್ಲಿ ನರಳುವಂತೆ
ಜಗವೇ ಪರಕೀಯವಾಗುತ್ತಿದೆ
ನನ್ನವರೆಂಬುವರಿಲ್ಲದೆ
ಮನೆಮನೆಯಲ್ಲಿ ಓಣಿ ಊರುಗಳಲ್ಲಿ
ಮುಖ ಮುಖಗಳು ಮುಖವಾಡಗಳು
ಜೀವಿಗಳೆಲ್ಲ ಕೀಲುಗೊಂಬೆಗಳು
ಒಳಗೊಳಗೇ ಕತ್ತಿ ಮಸೆಯುತ್ತಿವೆ
***
ತಿಂದದ್ದು ಜೀರ್ಣವೇ ಆಗುತ್ತಿಲ್ಲ
ಭ್ರಷ್ಟ ಬೊಜ್ಜು ಬೆಳೆಯುತ್ತಿದೆ
ಎತ್ತಲ್ಲೂ ಅಪವಾದ ಅಪಪ್ರಚಾರಗಳ
ಗ್ಯಾಸು ಊದುತ್ತ ವಾಯುಮಾಲಿನ್ಯ
ತಿಂದೂ ತಿಂದೂ ನಾಲಿಗೆ ಪಾಚಿಗಟ್ಟಿದೆ
ಯಾವ ಲಕ್ಷ ಕೋಟಿಗಳ ಆಪಾದನೆಗಳು
ಸಲೀಸಾಗಿ ಜಾರಿಕೊಂಡು ಹೋಗುತ್ತವೆ
ಜೀವ ಸೆಲೆ ಬತ್ತಿಹೋಗಿದೆ
ಅಂತರ್ಜಲ ಒಳಗೊಳಗೆ ಇಳಿದಂತೆ
ಸತ್ಯ ನ್ಯಾಯನೀತಿ ಪ್ರಾಮಾಣಿಕತೆಗಳ
ಹೃದಯ ಸೆಲೆಗಳು ಬತ್ತಿ ಹೋಗುತ್ತಿವೆ
ಅಲ್ಲೋ ಇಲ್ಲೋ ಹುಡುಕಬೇಕೆಂದರೆ
ನೂರಾರು ಅಡಿಗೆ ಒಡಲೊಳಗೆ ಕೊರೆಯಬೇಕು
ಕಣ್ಣೋಟ ಮಬ್ಬು ಮಬ್ಬು ಮುಂದೆ
ಕರಾಳ ಭವಿಷ್ಯದ ಕತ್ತಲಾವರಿಸಿದೆ
ಯಾವ ಕಡೆ ದಾರಿ ಯಾವುದು ಸಂದು
ಗೊತ್ತಾಗುತ್ತಿಲ್ಲ ಎಲ್ಲ ಅಯೋಮಯ
ನನ್ನ ಬಟ್ಟೆ ಯಾವುದು ಬೇರೆಯವರದು
ಯಾವುದು ಪರಪಾಟಾಗುತ್ತವೆ
ನನ್ನದು ಬಿಟ್ಟು ಪರರದನ್ನು ಒಮ್ಮೆ
ಎರಡೂ ಕೂಡಿಸಿ ಅರ್ಧರ್ಧ ಒಮ್ಮೆ
ಸೇರಿಸಿ ಉಟ್ಟುಕೊಳ್ಳುತ್ತೇನೆ
ಅಸಹ್ಯವೆನಿಸುತ್ತದೆ ಆದರೂ
ಬಟ್ಟೆಗಳ ಸಡಿಲು ಬಿಗುವು
ಗೊತ್ತಾಗುವುದಿಲ್ಲ
ಬಟ್ಟೆ ಎಂದು ಹಿಡಿದು ಹೊರಟದ್ದೆಲ್ಲ
ಮುರಾಬಟ್ಟೆ ಕೊರಕಲಿಗೋ ಗಟಾರಕ್ಕೋ
ಚಾಳೀಸು ಬಂದು ಮತ್ತೆ ಬಿಟ್ಟು ಹೋಯಿತು
ಐವತ್ತರ ಗಡಿ ದಾಟಿ ಅರವತ್ತರ ಅರುಳುಮರುಳು
ಮೈಯ ಮೂಲೆ ಮೂಲೆಗಳಲ್ಲಿ ಗಾಯಗಳು
ಅಲ್ಲಿ ಕಗ್ಗೊಲೆ ಇಲ್ಲಿ ಸೇಡು ಅತ್ಯಾಚಾರ
ಅಂಗಾಂಗಗಳ ಹರತಾಳ ಮೂಕ ಮುಷ್ಕರ
ಕಾಲುಗಳು ಮುಂದೆ ನಡೆಯುವ
ಶಕ್ತಿ ಕಳೆದುಕೊಂಡಿವೆ
ಪ್ರಗತಿ ಪುರೋಗತಿಗಳ ಓಟವಂತೂ ದೂರ
ಬಾಯೇನೋ ವಟಗುಟ್ಟುತ್ತಿದೆ
ವೇದಿಕೆಗಳ, ಕಾಗದಗಳ, ಕ್ರಾಸ್‌ರೂಮುಗಳ
ಭಾಷಣಗಳಂತೆ, ಕಾವ್ಯ, ಸಿನಿಮಾ
ಪರದೆಗಳ ಕನವರಿಕೆಗಳಂತೆ
ಯೋಜನೆ ಆಶ್ವಾಸನೆಗಳ ಉಗುಳೇ ಹೆಚ್ಚು
ಮಂತ್ರಕ್ಕಿಂತ ತಂತ್ರಕ್ಕಿಂತ
ಹೊಟ್ಟೆಯ ಸಿಟ್ಟು ರಟ್ಟೆಯಲ್ಲಿ
ಏರಿ ಬರದೆ ಆವಿಯಾಗಿ ಹೋಗುತ್ತದೆ
ಕನಸುಗಳಾಗಿ ತೇಲಿ ಮೇಲೆ
ವಯಸ್ಸಿಳಿದಂತೆಲ್ಲಾ ಈ ದೇಹ
ಒಂದೊಂದೇ ರೋಗಕ್ಕೆ ಎಡೆ ಮಾಡಿಕೊಡುತ್ತದೆ
ಕ್ಷಯ ಕ್ಯಾನ್ಸರ್ ಏಡ್ಸ್‌ಗಳಂತೆ
ಸಮಸ್ಯೆಗಳು ಪರಿಹಾರವಿಲ್ಲ
ರಾಜಕೀಯ ಕೊಳಚೆ ರಾಡಿ ನೀರು
ಕುಡಿಯುವ ನೀರನ್ನೂ ಕೊಳಕೆಬ್ಬಿಸಿದೆ
ಬಿ.ಪಿ. ಏರುಪೇರು
ಪಕ್ಷಗಳ ಬಿರುಸು ತುರುಸಿನ ಪೈಪೋಟಿಯಂತೆ
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿ
ಮೈಮೇಲಾದ ಯಾವ ಗಾಯವೂ ಮಾಯುತ್ತಿಲ್ಲ
ಗಡಿ ಭಾಷೆ ಕೋಮು ಗಾಯಗಳು
ಮಾಯದೇ ಬಲಿಯುತ್ತಾ ಹೊರಟಿವೆ ದಿನೇ ದಿನೇ
ಜಿಜೀವಿಷೇತ್ ಶತಂ ಸಮಾಃ
ಎಂಬ ಆಶಯ ಪೂರ್ವಜರಲ್ಲಿ ನನಸಾಗಿದ್ದುದು
ಈಗ ಒಂದು ಒಣ ಮಾತು ಕೈಗೂಡದ ಕನಸು
ಅರ್ಧ ಆಯುಷ್ಯ ಕಳೆಯುವುದರಲ್ಲೇ
ಸಾವಿನೊಡನೆ ಮುಖಾಮುಖಿ ಮಾತುಕತೆ
ಅದೂ ರೋಗಗಳ ತವರಾದ ಈ ದೇಹ
ಸದೃಢವಾದ ಅಂಗಾಂಗಗಳೊಡನೆ
ನೂರು ವರ್ಷ ಬಾಳುವುದೆಂದರೇನು
ಅದೊಂದು ದೂರ ಗಗನದ ಚಿಕ್ಕಿ
*****