ನೂರಐವತ್ತೈದು ವರುಷಗಳು ದಾಸ್ಯದಲೆ
ಬಿದ್ದು ಭಾರತ ತನ್ನ ಆತ್ಮವನೆ ಮರೆತಿಹುದು
ತನ್ನ ಶಕ್ತಿಯಲಿಂದು ಇನಿತಾದರೂ ಅದಕೆ
ನಂಬುಗೆಯು ಉಳಿದಿಲ್ಲ! – ಕೂಪದಲಿ ಉರುಳಿಹುದು!
ಮತ್ತೆ ನಮ್ಮೀನಾಡು ಕತ್ತಲಿಂ ಹೊರಗೆದ್ದು
ಬೆಳಕಿನಲಿ-ಸ್ವಾತಂತ್ರ್‍ಯ ಜ್ಯೋತಿಯಲಿ ನಲಿಯುವುದು
ಉಂಟೇನು ಎಂದೆನುವ ಶಂಕೆಗಳು ಎದ್ದೆದ್ದು
ಮನವ ಹಿಂಡುತಲಿಹುವು-ಹೃದಯ ಸಿಡಿಯುತಲಿಹುದು!
ಹೊರಗೆನಿತು ಕುತ್ತಗಳು ಬಂದರೂ ಬರಬಹುದು
ಆತ್ಮವನು ಕತ್ತಲೆಯ ಮುಸುಕು ಮುತ್ತದ ಹಾಗೆ
ತನ್ನ ತೇಜೋಬಲವ ಹೆಚ್ಚಿಸುತ ಮುನ್ನಡೆದು
ತನ್ನಲೇ ತಾ ನಂಬಿ ನಿಜವನರಿಯುವ ರೀತಿ
ಬೋಧಿಸಿದ ವಿಶ್ವಗುರು ಗಾಂಧೀಜಿ ನಿನ್ನಡಿಗೆ
ಕನ್ನಡದ ಕೂಸೊಂದು ತರುತಿಹುದು ಕಿರುಪ್ರಣತಿ!
*****