ಪ್ರಿಯ ಸಖಿ,
ಶಿಷ್ಟತೆಯನ್ನು ಮೈಗೂಡಿಸಿಕೊಂಡಿರದ ನೀಚರು ತಮ್ಮದೆನಿಸುವ ಎಲ್ಲ ವಸ್ತುಗಳನ್ನು ಕೆಟ್ಟ ಕೆಲಸಗಳಿಗಾಗಿ, ತಮ್ಮ ಚಟ, ಸ್ವಾರ್ಥಸಾಧನೆಗಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯಪಾತ್ರ ವಹಿಸುವುದು ನಾಲಿಗೆ. ಪುರಂದರದಾಸರ ಈ ಹಾಡನ್ನು ನೀನೂ ಕೇಳಿರಬಹುದು.
ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೇ ಪರರ ದೂಷಿವುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ
ಎನ್ನುತ್ತಾರೆ. ಕೆಲನೀಚರಿಗೆ ಎಲ್ಲದರಲ್ಲಿಯೂ ತಪ್ಪು ಹುಡುಕುವ, ತಮಗೆ ಸಂಬಂಧವಿರದ ವಿಷಯಕ್ಕೂ ಮೂಗು ತೂರಿಸುವ ಕೆಟ್ಟ ಚಟ. ಇಂಥವರಿಗೆ ಬುದ್ಧಿ ಹೇಳುತ್ತಾ ದಾಸರು ‘ವಿಚಾರವಿಲ್ಲದೆ ಪರರ ದೂಷಿಸುವದಕ್ಕಾಗಿ ನಾಲಿಗೆಯನ್ನು ಚಾಚಬೇಡ’ ಎನ್ನುತ್ತಾರೆ.
Speak little and speak the truth ಕಡಿಮೆ ಮಾತಾಡು ಮತ್ತು ಸತ್ಯವನ್ನೇ ಮಾತಾಡು ಎನ್ನುತ್ತಾನೆ ಷೇಕ್ಸ್‍ಪಿಯರ್. ಎರಡೂ ಕಷ್ಟದ ಕೆಲಸವೇ ಆದರೆ ನಿಜಕ್ಕೂ ಮೌಲ್ಯವುಳ್ಳ ಆದರ್ಶ. ಹೆಚ್ಚು ಮಾತಾಡುವ ವ್ಯಕ್ತಿ ಬುಡಬುಡುಕೆಯಾಗಿ ಬಿಡುವ ಅಪಾಯವಿದೆ. ತನ್ನ ನಾಲಿಗೆಯನ್ನು ಹಿಡಿತದಲ್ಲಿ ಇರಿಸಿಕೊಳ್ಳಲಾರದೇ ಮನಬಂದಂತೆ ಮಾತಾಡುವ ವ್ಯಕ್ತಿ ತನ್ನ ಮಾತಾಡುವ ಚಟದಲ್ಲಿ, ಹುಚ್ಚಿನಲ್ಲಿ ಸುಳ್ಳುಗಳನ್ನು ಸೃಷ್ಟಿಸುತ್ತಾ ಹೋಗುತ್ತಾನೆ. ಬರುಬರುತ್ತಾ ಅದವನಿಗೆ ರೂಢಿಯೂ ಆಗಿ, ಅದೇ ಅವನಿಗೆ ಖುಷಿ ಕೊಡುವ ವಿಷಯವೂ ಆಗಿಬಿಡುತ್ತದೆ. ಆಗ ಆ ವ್ಯಕ್ತಿ ಅಂತರಾಳದಲ್ಲಿ ಜೊಳ್ಳಾಗುತ್ತಾ ಒಂಟಿಯಾಗಿ ಬಿಡುತ್ತಾನೆ. ಏಕೆಂದರೆ ಅವನೇ ಸೃಷ್ಟಿಸಿರುವ ಸುಳ್ಳುಗಳಿಗೆ ಅವನ
ಅಂತರಾತ್ಮಕ್ಕಾದರೂ ಅವನು ಉತ್ತರಿಸಬೇಕಾಗುತ್ತದಲ್ಲವೇ?
ಸಖಿ, ಇದು ಒಳಗಿನ ವಿಚಾರವಾಯ್ತು. ಆದರೆ ಹೊರ ಪ್ರಪಂಚದಲ್ಲಿ ಇಂತಹ ನೀಚರಾಡುವ ಮಾತು ಎಷ್ಟೆಷ್ಟೋ ಘಾತಗಳನ್ನೇ ಸೃಷ್ಟಿಸಿಬಿಡಬಹುದು. ಕೊನೆಗೊಮ್ಮೆ, ಅಂತಹ ಮಾತು ಆಡಿದವನ ಬುಡಕ್ಕೆ ಕೊಡಲಿಹಾಕಬಹುದು. ಆದರೆ ಅಷ್ಟರಲ್ಲೇ ಕಾಲವೇ ಮೀರಿರಬಹುದು. ಅದಕ್ಕೆಂದೇ ಕವಿ ಫ್ರಾಂಕ್ಲಿನ್ “A slip of the foot you may soon recover, but a slip of the tongue you may never get over” ಕಾಲು ಜಾರಿದರೆ ತಕ್ಷಣ ಸರಿಹೋಗಬಹುದು ಆದರೆ ನಾಲಿಗೆ ಜಾರಿದರೆ ಮತ್ತೆಂದಿಗೂ ಸರಿಹೋಗಲಾರದು ಎನ್ನುತ್ತಾನೆ. ವಿವೇಚನೆಯಿಲ್ಲದೇ ಮಾತನಾಡುವುದಕ್ಕಿಂತಾ ಮೌನವಾಗಿರುವುದು ಲೇಸಲ್ಲವೇ ಸಖಿ?
*****