ಈ ಸಂಜಿ ಈ ರಾತ್ರಿ ಬಂದೇ ಬರುವಿಯೆಂದು ಕಾದೆ
ಮೌನದ ಬೆಳದಿಂಗಳು ಸುಮಧುರಯಾತನೆ ಏಕಾಂಗಿ
ಏನಿದು ಕಾತುರ ಏನಿದು ಬೇಸರ ಎಂತಿಷ್ಟೋ ಉಸಿರು
ಬಾಗಿಲು ತೆರೆದಿದೆ ತೋರಣ ಕರೆದಿದೆ ಬಾಬಾ ಎಂದು
ಅದರುವ ತುಟಿಗಳು ಕಂಬನಿ ಕಣ್ಣುಗಳು ಕಾದಿವೆ
ಜಾರುಗೊಡುವುದಿಲ್ಲ ಈ ಹನಿಗಳನು ಬತ್ತಿಸುವುದಿಲ್ಲ ತುಟಿ
ವಸಂತ ಗಿಡಗಿಡಕೆಲ್ಲ ಆಕ್ರಮಿಸಿ ಜೀಕಾಡಿ ಹರೆನಗುವಾಗ
ನೀನಲ್ಲಿ ಆ ಊರಲ್ಲಿ ಅರ್ಥವಿಲ್ಲದ ರಾತ್ರಿಗಳೊಂದಿಗೆ
ಚಂದ್ರ ಇಣುಕದಂತೆ ಗಾಳಿನೂಕಿ ಮನಕುಗ್ಗದಂತೆ
ಕಿಟಕಿ ಹಾಕಿ ಪರದೆ ಎಳೆದು ದೀಪಸಣ್ಣಾಗಿಸಿ ಒರಗಿರುವೆ
ಭರವಸೆಯೊಳಗೆ ಕನಸು ಕಟ್ಟಿಸಿ ಬರುವಾಗ ಬೇಕೆಂದಿದ್ದೇನು
ಒಗಟಾಗಿಸುತಿರುವೆ ಈ ಚಳಿರಾತ್ರಿಯ ನನಸುಗಳನು
ಬೆಳಕಾಯಿತು, ಹೂವಾಡಗಿತ್ತಿಯ ಮತ್ತೊಂದು ಮಾಲೆ, ರಂಗೋಲಿ ನಗು
ತುಟಿ ಬತ್ತಿ ಕಂಬನಿ ಉದುರಿವೆ ಮೈಮನ ಉರಿದಿದೆ.
*****