ಒಂದೂರಿನಲ್ಲಿ ಒಬ್ಬರಸಿದ್ದ
ಅವನುಡುಪೆಂದರೆ ಬಹು ಪ್ರಸಿದ್ದ.
ಒಮ್ಮೆಗೆ ಓಲಗದೊಳು ಕುಳಿತಿರಲು
ಬಂದೆರೆಡೆಗೆ ಇಬ್ಬರು ದರ್ಜಿಗಳು,
“ಕಂಡೂ ಕಾಣದ ತೆರ ನವಿರಾಗಿಹ
ಗಾಳಿಗು ಆಕಾಶಕು ತೆಳುವಾಗಿಹ
ಸೋಜಿಗದುಡುಪನು ಹೊಲಿಯುವೆ”ವೆಂದು
ಆಣೆಯನಿಟ್ಟರು ಎಲ್ಲರ ಮುಂದು.
ಅರಸಗೆ ಉಡುಪೆಂದರೆ ಬಲು ಆಸೆ.
ನಂಬಿಸಿತವನನು ಠಕ್ಕರ ಭಾಷೆ.
ಒಂದು ವರುಷ ಗಡುಬನು ಕೇಳಿದರು
ರಾಶಿಹೊನ್ನ ಮುಂಗಡ ಕೇಳಿದರು.
ಉಡುಪಿನಾಸೆಗರಸಸ್ತು ಎಂದ
ಅವರೆರೆತಕೆಲ್ಲಕ್ಕೂ “ಹ್ಞೂ” ಎಂದ.
ಇಂತು ಬೊಕ್ಕಸವ ಬರಿದನು ಮಾಡಿ
ನೆಯ್ಯುವ ಹೊಲಿಯುವ ಆಟವ ಹೂಡಿ
ಜಾಣರಿಗೇ ಇದು ಕಾಣುವುದೆಂದು
ಸಾಮಾನ್ಯರಿಗೆಂದಿಗು ಅಲ್ಲೊಂದು
ಬಂದವರಿಗೆಲ್ಲ ಬಯಲನೆ ತೋರಿ
ಇಲ್ಲದುಡುಪಿನಂದವನೇ ಸಾರಿ
ಎಲ್ಲರ ನಂಬಿಸಿದರು ದರ್ಜಿಗಳು.
ಇದರ ಮಾತನಡುಗೂಲಜ್ಜಿಗಳು
ಹರಡಿದರೆಲ್ಲೆಡೆ ಜಾತ್ರೆ ನೆರೆಯಿತು.
ದೊರೆ ಉಡುಪನುಡುವ ದಿನವೇರ್ಪಟ್ಟಿತು.
ಉಟ್ಟನರಸನೀ ಬಯಲುಬಟ್ಟೆಯ,
ಬೆತ್ತಲೆಯೊಳೆ ಕೊಂಡನು ಜನದಿಟ್ಟಿಯ!
“ಅಯ್ಯೋ! ಬರಿಮೈ” ಎಂದರು ಜನಮನದೊಳಗೆ,
“ಆಹಾ ವಸ್ತ್ರದ ನವಿರೆಂಥದು!” ಎಂದರು ಹೊರಗೆ.
ಆದೊಡೆ ಮಗುವೊಂದು
“ಅಯ್ಯೋ ಬೆತ್ತಲೆಬಸವನ ನೋಡೆ”ಂದು
ಚಪ್ಪಳೆಯಿಕ್ಕಿತು; ಎಂಥ ದಿಟ್ಟತನ!
“ಹೌದೇ, ಬರಿಬೆತ್ತಲೆ!” ಎಂದರು ಊರ ಜನ
“ದಿಟ, ದಿಟ” ಪಿಸುಗುಟ್ಟಿತು ಪರಿವಾರ ;
ಅಳುಕಿ ಅಳುಕಿ “ಹೌದೆ”ಂದಿತು ಸರಕಾರ.
ಆಗರಸನು ಬೆಚ್ಚಿ
“ಕೆಚ್ಚಿನಿವರ ನೆಚ್ಚಿ”
ಎನ್ನುತ ಅವಮಾನಕೆ ಕಣ್ಮುಚ್ಚಿ
ಓಡಿದನರಮನೆಗೆ,
ತಿಂಗಳವರೆಗೂ ಬಾರದೆ ಹೊರಗೆ
ನೀವೇನೆನ್ನುವಿರೀ ಕತೆಗೆ?
ಈ ಕವನ ಹಾನ್ ಅನ್‌ಡೆರ್‌ಸೆನ್ ಅವರ ಕತಯೊಂದರ ಭಾವಾನುವಾದ.
*****