ಅಂದು – ಋಷಿಗಳ್ ಯೋಗಿಗಳ ಪರಮ ದಾರ್ಶನಿಕರ್
ಭಕ್ತರ್ ವಿರಕ್ತರ್ ಕೀವಂದ್ರರ್
ದಿವ್ಯಚಕ್ಷುನಿನಿಂ
ಅಣುವನೊಡೆದರ್
ಕಂಡರದ್ಭುತಮಂ,
ಪೂರ್ಣ ದರ್ಶನಮಂ:
ವ್ಯೋಮ ಭೂಮಿಗಳೊಳ್
ರವಿಯಾಗಿ ಶಶಿಯಾಗಿ ತಾರಾನಿಕರಮಾಗಿ
ಸಿಡಿಲಾಗಿ ಮಿಂಚಾಗಿ ವೃಷ್ಟಿಯೆನಿಸಿ
ಕಡಲಾಗಿ ಭೂಮಿಯೊಡಲಾಗಿ
ತಾನ್ ಸರ್ವ ಸೃಷ್ಟಿಯೆನಿಸಿ
ಮೆರೆವ
ಪರಮ ತೇಜಸ್ವಿಯನ್
ಅಣುವಿಗಣುವಾದನನ್
ಮಹತೋಮಹೀಯನನ್
ಸರ್ವಶಕ್ತನನ್
ಸರ್ವಕಾರಣನನ್
ಪರಮಾತ್ಮನನ್
ಲೋಕತಾರಕನನ್.
ಇಂದು – ಹಿರಿ ವಿಜ್ಞಾನಿಗಳ್ ಪರಮ ಶಕ್ತರ್
ಪ್ರತ್ಯಕ್ಷತಾ ತತ್ವದತಿವೀರ ಭಕ್ತರ್
ಯಂತ್ರ ಚಕ್ಷುವಿನಿಂ
ಅಣುವನೊಡೆದರ್
ಜಗದ
ಕಟ್ಟನೊಡೆದರ್:
ಒಡೆದು
ಕಂಡರದ್ಭುತಮಂ,
ಖಂಡ ದರ್ಶನಮಂ:
ವ್ಯೋಮ ಜನ ಭುವಿಗಳೊಳ್
ರವಿ ಶಶಿಗಳಂ ನೊಣೆವ ರಾಹು ಸಮನಾಗಿ
ತಾರೆಗಳ ಮುಕ್ಕುಳಿಪ ತಮದ ರಕ್ಕಸನೆನಿಸಿ
ಸಿಡಿಲಾಗಿ ಸಿಡಿದು ಸೀಳ್ ಮಿಂಚಾಗಿ ಇಳಿದು
ಸುರಿದಗ್ನಿವೃಷ್ಟಿಯಾಗಿ
ಕಡಲನೇ ಕುಡಿದು ನೆಲಮೆಲ್ಲಮನ್ ಒಡೆದು
ಸೃಷ್ಟಿಸರ್ವಸ್ವಮಂ ಬಿಡದೆ ತೊಡೆದು
ಅತಿ ರೌದ್ರದೆಸಕದಿಂ
ಉರಿದು ಮಾಮಸಕದಿಂ
ಪ್ರಲಯ ರುದ್ರಂ ತಾನೆ ಎನಿಸಿ
ಮೆರೆವ
ಪರಮ ಪ್ರಕಾಶಮಂ
ಸೃಷ್ಟಿಯ ವಿನಾಶಮಂ
ಅಣುವಿನೊಳಶಕ್ತಿಯಂ
ಲೋಕ ಮಾರಕಮಂ.
ಅದು ಶಾಂತಿದರ್ಶನಂ,
ಲೋಕತಾರಕ ಶಾಂತಿ;
ಇದು ಕ್ರಾಂತಿ ದರ್ಶನಂ,
ಲೋಕಮಾರಕ ಕ್ರಾಂತಿ.
ವಿಜ್ಞಾನಿಗಳ್ ಧರ್ಮಜ್ಞಾನಿಗಳ್ ತಾವಾಗಿ
ವಿಜ್ಞಾನದ ಸಿಡಿಲ್ ಬಾನವರ ಹೂವಾಗಿ
ಮಾನವರಿಗೊಸಗೆಯಾಗೆ
ಕ್ರಾಂತಿ ‘ಸಂಕ್ರಾಂತಿ’ಯಾಗೆ
ಶುಭವರಳೆ ಕ್ರಾಂತಿಯೊಳಗೆ
ನಿಶ್ಚಯಂ ಕಾಂತಿ ಇಳೆಗೆ.
*****