ಸ್ವತಂತ್ರ ಭಾರತದರುಣೋದಯದ
ಮುಂಗಿರಣವದೋ ಮೂಡುತಿದೆ;
ಶತಮಾನದ ಮೇಲಿನ ಕಡು ದಾಸ್ಯದ
ಭಂಗಗೈದ ತಮವೋಡುತಿದೆ.
ಸ್ವಾತಂತ್ರ್‍ಯದ ಹರಿಕಾರರು ಮಲಗಿದ
ಜನರನೆಚ್ಚರಿಸ ಬಂದಿಹರು;
ಚಾತಕದೊಲು ಬಾಯ್ ಬಿಡುತಿಹ ಜನಕೆ
ಒಸಗೆ ಭರವಸೆಯ ತಂದಿಹರು.
ಇನ್ನೂ ಮಲಗಿರಲೇನು ಚೆಂದ? ಮೈ
ಜಡತೆಯ ಕೊಡಹುತ ಎದ್ದೇಳಿ;
ತನ್ನ ಪಾಲಿಗಿಹ ನಾಡಿನ ಸೇವೆಯ
ಭಾಗವ ಸಲಿಸುವ ಮನ ತಾಳಿ.
ಯಾರೋ ಬಿಡುಗಡೆ ನೀಡುವರೆಂದು
ಬೇಡುತಲಿರೆ ಎಂದಿಗೆ ಮುಕುತಿ?
ಸಾರಿಬರುವುದು ತಾನೇ ಬಿಡುಗಡೆ
ಹೂಡಲೆಮ್ಮ ಆತ್ಮದ ಶಕುತಿ.
ಇಂದಿನ ಜಯ ಹೊರಶಕ್ತಿಯ ಹುಸಿಜಯ
ಹಿಂಗಲಿಲ್ಲ ಲೋಕದೊಳು ಭಯ;
ಮುಂದೆ ಭಾರತವು ತೋರುವ ಆತ್ಮದ
ಜಯವಾಗಲಿ ಇಳೆಗೆಲ್ಲ ಜಯ.
*****