ನೀನೆಲ್ಲಿಂದು?
ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ
ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ
ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ
ಆದರೆ ಆಗಾಗ ಫಳಕ್ಕೆಂದು ಮಿಂಚಿ
ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ
ಇಳೆಗಿಳಿಯುವೆ, ನೆಲವೇನೂ ತೋಯದೆ ಇದ್ದರೂ
ನನ್ನೆದೆಯ ತೊಳೆದು ಬಿಡುವೆ,
ಕಟ್ಟೆಯ ಮೇಲಿಂದ ಕೆಟ್ಟು ಬೀಳುವವನ
ಬಂದೆತ್ತುವೆ ಮಲಗಿದ್ದವನನೆಬ್ಬಿಸುವೆ
ಎತ್ತಿದ ನಿನ್ನ ಕೈಗಾಗಿ ನಾನು ತಡಕಾಡುವೆ
ನಿನ್ನ ಮೈಯೆಲ್ಲೋ ಮುಖವೆಲ್ಲೋ?
ಬಿಳಿ ಮೋಡದಲ್ಲಿ ಸುಳುವುದೋರಿ ಮರೆಯಾಗುವಿಯಲ್ಲಾ!
ಅಂದಿದ್ದವಳಿಂದಿಲ್ಲವಲ್ಲಾ ಇಂದು,
ಒಳಗಣ್ಣ ಮುಂದೊಂದು ಚಿರವಾದ ಚಿಕ್ಕೆಯಾಗಿರುವ ಇಂದು.
ಎಂದೆಂದು
*****