ಅದು ಅಳುತ್ತಲೇ ಇದೆ
ಅಳುವೇ ಹುಟ್ಟಿ ಅಳು ಹೊಳೆಯಾಗಿ ಹರಿದಿದೆ,
ಅದು ನಕ್ಕರೂ ಅತ್ತಂತೆಯೇ ಇರುತ್ತದೆ
ಅದರ ಅಳುವು ನೋಡಿದವರಿಗೆ ಅಳು ಬರುವುದಿಲ್ಲ.
ಮನೆ ತುಂಬ ಮಂದಿ, ಉಂಡುಡಲು ಬೇಕಾದಷ್ಟು
ತುಂಬಿದ್ದರೂ
ಅದು ಅಳುತ್ತಲೇ ಇದೆ, ಕೈಕಾಲು ಬಡಿದು,
ಬಿದ್ದು ಎದ್ದು, ಸಿಂಬಳದೊಡನೆ ಕಣ್ಣೀರು ಸುರಿಸುತ್ತ
ಮೋಡ ಮುಚ್ಚಿ ಜಿಟಿ ಜಿಟಿ ಸೋನೆಯಾಗಿ
ಒಂದೇ ರೋಗರಾಗದ ಬೇತಾಳ ಬೇನೆಯಾಗಿ
ಬಾನಿನಗಲ ಬಾಯಿದೆರೆದು ಭೂಕೇಂದ್ರಕ್ಕೆ ಬೇರಿಳಿಸಿ
ಕೊರೆಯುವಂತೆ
ದಿಕ್ಕು ದೆಸೆ ಸೆಲೆಯೊಡೆಯಲು ಹಿಮ್ಮೇಳ ಹಿಡಿಯುವಂತೆ
ಆಕಾಶಕ್ಕೆ ಕೈ ಚಾಚಿ ಚಾಚಿ ಚೀರಿ ಅಳುತ್ತದೆ
ಅಳುತ್ತಲೇ ಇದೆ
ಅದಕ್ಕೆ ಅಳುವಿನಲ್ಲೇ ಸರ್ವಾರ್ಥಸಿದ್ಧಿ ಇದ್ದಂತಿದೆ
*****