ಕವಿತೆಯೆಂದರೆ…
ಪದ, ಹದ, ಮುದ, ಮಾತು
ಮಾತಿಗೂ ಮಿಗಿಲು ಮುಗಿಲು.
ನಿಗೂಢ ಬಯಲು
ಬಟ್ಟ ಬಯಲು
ಹೊಳೆ ಹೊಳೆವ
ಶಿವನ ಅಲುಗು.
ಕವಿತೆಯೆಂದರೆ…
ಕಂಬಳದ ಕಸರತ್ತು
ಅಮ್ಮನ ಕೈ ತುತ್ತು
ಮಗುವಿನ ಮುತ್ತು
ಮತ್ತು, ಗಮ್ಮತ್ತು
ಶಬ್ದಗಳ ಕರಾಮತ್ತು
ಉಸ್ತಾದನ ಹಣೆ ಮೇಲಿನ ಬೆವರು!
ಕವಿತೆಯೆಂದರೆ…
ಕವಿಗೆ ಗೊತ್ತು
ಗುಡ್‌ಡೇ ಬಿಸ್ಕತ್ತು!
ಉಟ್ಟು ಬೈಕ್!
ನಾಕ, ನರಕ, ವಿಸ್ಮಯ…
ಶಬ್ದಗಳ ಸರಕು!
ಅಲ್ಪಸ್ವಲ್ಪ
ಕಪೋಲ ಕಲ್ಪಿತ
ಕನಿಕರಕ್ಕೆ ಉದುರಿದ ಫನ್ನೀರು.
ಇಬ್ಬನಿ ಸಾಲೆ
ಬೆವರಿನ ಮಾಲೆ.
ಕವಿತೆಯೆಂದರೆ…
ಹೆಣ್ಣು.
ಜಗದ ಕಣ್ಣು.
ಮಾಗಿದ, ಮಾವಿನ ಹಣ್ಣು.
ಜಗಮಗಿಸುವ ಬೆಂಕಿಚೆಂಡು!
ಹದಿಹರೆಯದ ಗಂಡು.
ಸಿಡಿ ಗುಂಡು.
ಚಂದ್ರ, ಸೂರ್‍ಯ, ಮಳೆ, ಗಾಳಿ, ಆಲಿಕಲ್ಲು,
ಗುಡುಗು, ಸಿಡಿಲು, ಮುಂಗಾರಿನ ಮಿಂಚು!
ಇಂದ್ರಚಾಪ!
ಹೇಳದ, ತಾಳದ ಬೇಗುದಿ!
ಜೀವ ಜಗತ್ತಿನ ಪರಿತಾಪ!
ಕವಿತೆಯೆಂದರೆ…
ಕಂದಮ್ಮನ ಮುಗ್ಧನೋಟ.
ಕೆಂದಾವರೆ ತೋಟ.
ಕನ್ನಡಿಯ ಮೈಮಾಟ.
ವಸಂತ ಕೋಗಿಲೆ ಗಾನಽಽ…
ಈ ನೆಲದ ತಾನಽಽ…
ನಮ್ಮೂರು ಕೇರಿಯ ಸವಿಗಾನ!
ಶ್ರಮದಾನ!
ಸವಿಯ ಸಾಲು!
ಕವಿತೆಯೆಂದರೆ:
ಕವಿಯ ಜಾಣ್ಮೆ, ರಕ್ತ ಮಾಂಸ!
ಅಭಿವ್ಯಕ್ತಿ, ಭಾವನೆ, ಉಸಿರು!
ವಿದ್ವುತ್, ಪ್ರತಿಭೆ, ಉತ್ಪತ್ತಿ, ರಸ!
ಕವಿತೆಯೆಂದರೆ:
ಶಿವನ ಅಲಗು, ಶಂಕು, ಚಕ್ರ, ಮೃದಂಗ!
ಜನರ:
ಪ್ರತಿಬಿಂಬ, ಗತಿಬಿಂಬ, ಅವಿಷ್ಕಾರ,
ಪ್ರೀತಿ ಪ್ರೇಮದ ಅಳವಂಡ, ರಸಾಸ್ವಾದನೆ,
ರಸಗವಳ, ಶಬ್ಧ ಚಮತ್ಕಾರ, ಭಾವತ್ರೀವ್ರತೆ
ಅನುಭವಾಮೃತ, ಸಾರ ಸರ್ವಸ್ವ
ರವಿಕಾಣದ್ದು!
*****