ಅಂತರಂಗದ ಭಾವ ಮಸಗಿರಲಿ ಅಡಗಿರಲಿ
ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ!
ನಾಟಕದ ರಂಗವಿದು: ಪಾತ್ರಗಳ ವಹಿಸುತಿರು
ಶಾಂತಿಯಿಂ ನೀನೀಗ ಮೌನವನು ಅನುಸರಿಸು
ಹೆದರದಿರು ಕುದಿಯದಿರು ಹೇಡಿ ನೀನಾಗದಿರು
ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ ಸಿರಬಾಗು
ಕಡಲಿನಲೆಗಳು ನಿನ್ನನೆಲ್ಲಿಗೊಯ್ದರು ಸರಿಯೆ
ದೃಢವಾದ ಚಿತ್ತವನು ಬಿಡದೆ ಪಾಲಿಸು ನಿರುತ
ನೋಡಲ್ಲಿ ಶಿರವೆತ್ತಿ ಆಗಸವ ನೀನೊಮ್ಮೆ
ನೋಡಿದೆಯೆ ಆ ಸಿರಿಯ? ನಿಷ್ಕಲ್ಮಷದ ಪರಿಯ
ಬಾಳು ಸಾಕೆಂದಳುವ ಹೇಡಿಗಳ ಕಣ್ಣೊರಸಿ
ಅಭಯವನು ನೀಡುತಿಹ ಹಸ್ತದಂತಿದೆ ನಭವು
ಕೊನೆಯಿಲ್ಲ ಮೊದಲಿಲ್ಲ ಆಶೆಪಾಶಗಳಿಲ್ಲ
ಹರುಕಿಲ್ಲ ಮುರುಕಿಲ್ಲ ತಗ್ಗುದಿಣ್ಣೆಗಳಿಲ್ಲ
ಮಬ್ಬಿಲ್ಲ ಮಸುಕಿಲ್ಲ ನರಕಯಾತನೆ ಇಲ್ಲ
ಚಿರ ಶಾಂತಿಯಿಂ ತುಂಬಿ ತುಳುಕುತಿದೆ ಮುಗಿಲು
ಕಂಗಳಿಗೆ ಕಣ್ಣಾಗಿ ವಜ್ರಗಳ ಗಣಿಯಾಗಿ
ಜೀವನದ ಕುಸುಮದಾ ಚಂದಿರಗೆ ಮನೆಯಾಗಿ
ಪ್ರಜ್ವಲಿಸಿ ಶೋಭಿಸುವ ಭಾಸ್ಕರನ ಬೀಡಾಗಿ
ಆದರದಿ ವಿಶ್ವವನು ಪಾಲಿಸುವ ದೊರೆಯಾಗಿ
ರಸಿಕರಿಗೆ ರಸವಾಗಿ ಕವಿಗಳಿಗೆ ತವರಾಗಿ
ಮೇಘಗಳ ಧ್ವಜಪಟದಿ ಮೆರೆಯುತಿದೆ ಬಾನು
ಅದರಡಿಯೊಳಡಗಿರುವ ನಿನ್ನ ಭಾವವದೆಷ್ಟು?
ನೀನೆಷ್ಟು ಜನಕಜೇ! ಸುಮ್ಮನಿರು, ಸಾಕು ಸಾಕು!
*****