ಏನ ದುಡಿದೆ ನೀನು-ಭಾರಿ
ಅದೇನ ಕಡಿದೆ ನೀನು?
ನೀನು ಬರುವ ಮೊದಲೇ-ಇತ್ತೋ
ಭೂಮಿ ಸೂರ್ಯ ಬಾನು
ಕಣ್ಣು ಬಿಡುವ ಮೊದಲೇ-ಸೂರ್ಯನ
ಹಣತೆಯು ಬೆಳಗಿತ್ತೋ
ಮಣ್ಣಿಗಿಳಿವ ಮೊದಲೇ – ಅಮ್ಮನ
ಎದೆಯಲಿ ಹಾಲಿತ್ತೋ
ಉಸಿರಾಡಲಿ ಎಂದೇ – ಸುತ್ತಾ
ಗಾಳಿ ಬೀಸುತಿತ್ತೋ
ದಾಹ ಕಳೆಯಲೆಂದೇ – ನೀರಿನ
ಧಾರೆಯು ಹರಿದಿತ್ತೋ
ಇದ್ದ ಮಣ್ಣ ಎತ್ತಿ- ಕಟ್ಟಿದೆ
ದೊಡ್ಡ ಸೌಧವನ್ನ
ಬಿದ್ದ ನೀರ ಹರಿಸಿ – ಗಳಿಸಿದೆ
ವಿದ್ಯುತ್ ಬಲವನ್ನ
ಸದ್ದು ಬೆಳಕ ಸೀಳಿ – ತೆರೆದೆಯೊ
ಶಕ್ತಿಯ ಕದವನ್ನ
ನಿನ್ನದು ನಿಂತಿದೆಯೋ – ನೆಮ್ಮಿ
ಮೊದಲೆ ಇದ್ದುದನ್ನ.
ಇದ್ದುದನ್ನೆ ಹಿಡಿದು – ಭಾಗಿಸಿ
ಕೂಡಿ ಗುಣಿಸಿ ಕಳೆದು
ಗೆದ್ದೆ ಹೊಸದ, ನಾನೇ-ಸೃಷ್ಟಿಗೆ
ಪ್ರಭು ಎನಬಹುದೇನು?
ಚುಕ್ಕಿ ಬಾನ ತಡಕಿ – ಅಷ್ಟಕೆ
ಸೊಕ್ಕಿ ಕುಣಿವ ತಮ್ಮ
ಇರಲಾರಳೆ ಹೇಳೋ – ಅವುಗಳ
ಹಡೆದ ಒಬ್ಬ ಅಮ್ಮ ?
*****