ಮೋಹ ಮದ ಮತ್ಸರತುಂಬಿ
ಹೂಂಕರಿಸಿದ ಮನುಷ್ಯ
ವಯಸಾದಂತೆ ಸುಸ್ತಾಗಿ
ಮೋಡಕಾ ಬಜಾರದಂಗಡಿಗೆ ಬಂದು ಬೀಳುತ್ತಾನೆ.
ಕೊಳ್ಳುವವರು ಯಾರೂ ಇಲ್ಲ
ಜಂಗು ಹತ್ತಿ ಕಾಲ್ತುಳಿತಕೆ ಒಳಗಾಗಿ
ಕತ್ತಲು ಕೋಣೆ ಸೇರುವ ದುಃಖ.
ದೂರದೆಲ್ಲಿಂದಲೋ ದಯಾಮಯಿಗಳ
ಮೃದುಮಾತು, ಕೊಳ್ಳುವಿಕೆ
ಆಶ್ರಯದಾತರ ಪ್ರೀತಿ ಕರುಣಾಳು
ಕ್ಷಮಿಸಿತ್ತು.
ತಪ್ಪೊಪ್ಪಿಗೆಯ ಅವರವರ ಅಂತರಂಗಕೆ
ಹೊತ್ತಿತು ಬೆಳಕಿನ ಕಿರಣ.
ಮೋಡಕಾ ಬಜಾರದಂಗಡಿಗಳು ಮುಚ್ಚಿ
ವೃದ್ಧಾಶ್ರಮದ ಬಾಗಿಲು ತೆರೆದು
ಒಳಹೊಗುವಾಗ ಕಣ್ತುಂಬ ತಿಳಿನೀರು
ತುಳುಕಗೊಡದೇ ಅದರೊಳಗೇ
ತನ್ನ ತಾ ಪ್ರತಿಫಲಿಸಿಕೊಂಡ ಅರಿವು
ಅನಂತದೆಡೆಗೆ ಕಣ್ಮುಚ್ಚುವ
ಪ್ರಶಾಂತತೆಯ ಚಿತ್ರ.
*****