ಬಣ್ಣಬಣ್ಣದ ಭಾವಗಳ ಬಲೆಯೊಡ್ಡಿ ನಿಂತಿದೆ ಈ ಜಗ
ಕಣ್ಣುಕುಕ್ಕುವ ನೋಟವಿದು ಯಜಮಾನ ಕಾಣನು ಸೋಜಿಗ
ಅತ್ತ ಸೆಳೆವುದು ಇತ್ತ ಸೆಳೆವುದು ಇಲ್ಲದಿರುವನು ಕಲ್ಪಿಸಿ
ವ್ಯರ್ಥಮಪ್ಪುದು ಮರುಚಣವೆ ಇದೊ ಬಂದೆನೆಂಬುದು ವ್ಯಾಪಿಸಿ
ಏನು ಸಿಂಗರ ಮದುವೆ ಹಂದರ ಪಚ್ಚೆಪಯಿರಿನ ಹಸೆಗಳು
ಭಾನು ಶಶಿ ತಾರೆಗಳ ಮಂಟಪ ದಿವ್ಯಸೊಡರಿನ ಸಾಲ್ಗಳು
ತಿಂದು ತೇಗುವರೆನಿಬರೆನಿಬರೊ ಬಂದ ನೆಂಟರು ಮದುವೆಗೆ
ಒಂದು ವಸ್ತುವ ಕೊಳ್ಳದಂತೆಯೆ ಮರಳುತಿರುವರು ಲಗುಬಗೆ
ನಶ್ವರವು ನಶ್ವರವು ಎನ್ನುವ ಪುಸಿಯ ನುಡಿ ಮನಸೊಲ್ಲದು
ವಿಶ್ವಲೀಲೆಯು ನೃತ್ಯಗೈದಿರೆ ನಶ್ವರದ ನುಡಿ ಸಲ್ಲದು
ಹಾಡ ಮೊದಲಿಟ್ಟವರದಾರೊ ಹಾಡು ಸಾಗಿದೆ ನಿಲ್ಲದೆ
ಹಾಡು ಜನಕಜೆ ರಾಗದೊಳು ಸಂಸ್ಕೃತಿಗೆ ಹೊಂದುವ ಸೊಂಪಿದೆ
*****