ಪ್ರಿಯ ಸಖಿ,
ಅವನು ಸತ್ತು ಮಲಗಿ ಗಂಟೆಗಳೇ ಕಳೆದಿವೆ. ನಿಧಾನಕ್ಕೆ ಬರುವವರೆಲ್ಲಾ ಬಂದ ನಂತರ ಶವಸಂಸ್ಕಾರವೂ ನಡೆದಿದೆ. ಇಷ್ಟರವರೆಗೆ ನೋವಿನ ಹಿನ್ನೆಲೆಯಲ್ಲಿ ಮರೆಯಾಗಿದ್ದ ಹಸಿವು ಈಗ ಅವನ ಸಂಬಂಧಿಕರ ದೇಹದಲ್ಲಿ ಬೆಂಕಿಯಂತೆ ಸುಡುತ್ತಿರುವುದು ಗೋಚರಿಸುತ್ತದೆ. ಹೌದು ಅವರು ಏನನ್ನೂ ಸೇವಿಸದೇ ಹನ್ನೆರಡು ಗಂಟೆಗಳೇ ಕಳೆದಿವೆ. ಆದರೆ ಹಸಿವು ಎಂದು ಬಾಯಿಬಿಟ್ಟು ಹೇಳುವುದಾದರೂ ಹೇಗೆ? ಸತ್ತವನು ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಹತ್ತಿರದ ಸಂಬಂಧಿ.
ಆ ಸಮಯದಲ್ಲಿ ಕಿಚ್ಚಿನಂತೆ ಸುಡುತ್ತಿರುವ ಹಸಿವನ್ನು ಬೈಯ್ದುಕೊಳ್ಳುವವರೇ ಹೆಚ್ಚು. ಇಷ್ಟೆಯೇ ಸಂಬಂಧಗಳನ್ನು ಕಳೆದುಕೊಂಡಾಗಿನ ನೋವಿನ ತೀವ್ರತೆ ಅವನನ್ನು ಮಣ್ಣು ಮಾಡಿ ಬಂದೊಡನೆ ಹಸಿವು ಕಾಡಲು ಪ್ರಾರಂಭಿಸಿಬಿಡಬೇಕೆ? ಹಸಿವಿನ ಮುಂದೆ ನೋವು ಎರಡನೇ ಸ್ಥಾನಕ್ಕೆ ಹೋಯಿತೇ? ಹಾಗಿದ್ದರೆ ಇಲ್ಲಿ ಎಲ್ಲಕ್ಕಿಂತಾ ಮುಖ್ಯವಾದದ್ದು ಹಸಿವು ಮಾತ್ರವೇ? ಬೇರೆಲ್ಲದ್ದಕ್ಕೂ ಇಲ್ಲಿ ಅರ್ಥವೇ ಇಲ್ಲವೇ? ಬದುಕಲು ತಿನ್ನುವುದು, ತಿನ್ನಲು ಬದುಕುವುದು, ಇವೆರಡರ ನಡುವಿನ ವ್ಯತ್ಯಾಸದ ಗೆರೆ ಪ್ರಾರಂಭವಾಗುವುದು ಎಲ್ಲಿಂದ? ಎಂಬುದು ಮನದ ಪ್ರಶ್ನೆಗಳು. ನೋವಿದೆಯೆಂದು ಎಷ್ಟು ದಿನ ಉಪವಾಸವಿರಲು ಸಾಧ್ಯ? ನೋವಿನ ತೀವ್ರತೆ ಹಸಿವಿನ ತೀವ್ರತೆಯನ್ನು ಭಂಗಿಸಲು ಸಾಧ್ಯವೇ? ಎಂಬುದು ಬುದ್ಧಿಯ ತರ್ಕ.
ಸಖಿ, ನಾವು ಮರೆತಿದ್ದೇವೆ. ಹಸಿವು ದೇಹಕ್ಕೆ ಸಂಬಂಧಿಸಿದ್ದು, ನೋವಿದೆಯೆಂದು ಏನೂ ತಿನ್ನದಿರಲಾಗುವುದಿಲ್ಲ ಎಂಬ ವಿವೇಚನೆ ಬುದ್ಧಿಗೆ ಸಂಬಂಧಿಸಿದ್ದು. ದೇಹ, ಬುದ್ಧಿ, ಮನಸ್ಸು, ಮೂರೂ ಬೇರೆ ಬೇರೆಯಾದದ್ದೆಂದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹಾಗೇ ದೇಹದ ಹಸಿವಿಗೂ ಬುದ್ಧಿ, ಮನಸ್ಸುಗಳಿಗೂ ನೇರ ಸಂಬಂಧವಿಲ್ಲದಿದ್ದರೂ ನಾವು ಮೂರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತೇವೆ! ಬುದ್ಧಿಯ ಹಸಿವು, ಮನಸ್ಸಿನ ಹಸಿವುಗಳು ಇದ್ದರೂ ಅದಕ್ಕೆ ದೇಹದ ಹಸಿವಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ನಾವು ಕೊಡುವುದಿಲ್ಲ. ಏಕೆಂದರೆ ದೇಹದ ಹಸಿವು ಜೀವಕ್ಕೆ ಮೂಲವಾದುದು ಅದನ್ನು ಹಿಂಗಿಸಲೇಬೇಕು. ಅದು ಅನಿವಾರ್ಯ. ಆದರೆ ಬುದ್ಧಿಯ ಹಸಿವು; ಮನಸ್ಸಿನ ಹಸಿವುಗಳನ್ನು ಹಿಂಗಿಸಲೇಬೇಕಾದ ಅನಿವಾರ್ಯತೆ ಇಲ್ಲವೆಂದೇ ಅದು ಹಿಂದಕ್ಕೆ ತಳ್ಳಲ್ಪಟ್ಟಿದೆ.
ಬುದ್ಧಿಯ ಹಸಿವು ಇಂಗಿಸಲು ವಿಚಾರಗಳ, ಚಿಂತನಗಳ ಅವಶ್ಯಕತೆ ಇರುವಂತೆ ಮನಸ್ಸಿನ ಹಸಿವು ಇಂಗಿಸಲು ಪ್ರೀತಿ, ಅಕ್ಕರೆ, ಅಭಿಮಾನ, ಸ್ನೇಹ ಮುಂತಾದ ಭಾವನೆಗಳ ಅವಶ್ಯಕತೆ ಇದೆ. ಆದರೆ ದೇಹದ ಹಸಿವನ್ನು ಪೂರೈಸುವುದೇ ಮುಖ್ಯವಾಗಿ ಮಿಕ್ಕ ಹಸಿವು ಗೌಣವಾಗುತ್ತದೆ.
ಆದರೆ ಬರಿಯ ದೇಹದ ಹಸಿವನ್ನಷ್ಟೇ ಹಿಂಗಿಸಿ ಇದೇ ಬದುಕೆಂದುಕೊಂಡು ಆಯುಷ್ಯವನ್ನು ಕಳೆದರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸವೇನಿದೆ? ಬುದ್ಧಿಯ ಹಸಿವೂ
ಮನಸ್ಸಿನ ಹಸಿವೂ ನಮ್ಮನ್ನು ಸುಡಬೇಕು. ಅದನ್ನು ಹಿಂಗಿಸಿಕೊಳ್ಳಲು ನಾವೂ ಪ್ರಯತ್ನಿಸಬೇಕು. ಆಗ ಬದುಕು ಸಾರ್ಥಕ ಅಲ್ಲವೇ ಸಖಿ?
*****