ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ
ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು
ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ
ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ
ಈ ಗೂಡನೂಡೆದು ದೂಡಿ ಹಾರಿ ಹೋಗುತ್ತವೆ ಸ್ವಚ್ಛಂದ
ಹೊಳೆ ದಾಟಿದಂತೆ, ಬಿಡುಗಡೆಯಾದಂತೆ, ತೊಡರು ಹರಿದಂತೆ.
ಮುದಿಯಾದ ನಮ್ಮನ್ನು ಹದಕ್ಕೆ ಬರದ ನಮ್ಮ ಮರಿಗಳನ್ನು
ಬೀದಿಪಾಲು-ನಾಯಿಪಾಲು ಮಾಡಿ, ಹೊಸನಲ್ಲೆಯರೊಡನೆ
ಚಲ್ಲವಾಡುತ್ತ, ನಮ್ಮ ಹಣ್ಣೆಲೆತನವನ್ನು ಅಣಕಿಸಿ ಕಿಸಿಯುತ್ತ
ತಮ್ಮ ವೈಭವ ಭವನದ ಸುಖದಮಲಿನಲ್ಲಿ ನಾವು ಪೂರಾ ಕಾಣದಂತೆ
ಅವು ಮಬ್ಬೇರಿ ಹಾರಿದಾಗ
ಅಯ್ಯೋ ನೀತಿ ಅಳಿಯಿತು, ಕಾಲ ಕೆಟ್ಟಿತು, ಹೆಣ್ಣು ಕೆಡಿಸಿತು,
ಹೊನ್ನು ಭಿನ್ನ ಮಾಡಿತು, ತಾಯಿಗ್ಗಂಡರೆ, ಜಗಭಂಡರೇ
ಕೃತಘ್ನರೇ, ಕಡು ನಾರಕಿಗಳೇ ಎಂದು ಮುಂತಾಗಿ ನಾವು
ಹಳಿಯತೊಡಗಿದರೆ ನಮ್ಮ ಹಣೆಬರಹವನ್ನಷ್ಟೇ.
*****