ಪ್ರಿಯ ಸಖಿ,
ಇವನೊಬ್ಬ ಬೊಂಬೆ ಮಾರುವವನು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಬಿದಿರಿನ ದೊಡ್ಡ ಬುಟ್ಟಿಯಲ್ಲಿ ಹೊತ್ತುಕೊಂಡು ಅವನು ಬೀದಿ ಬೀದಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಾನೆ. ಒಂದೊಂದು ಬೊಂಬೆಗೂ ಬೇರೆ ಬೇರೆ ಬೆಲೆ. ಹಾಗೇ ಬೊಂಬೆಗಳೂ ವಿಭಿನ್ನ ಆಕಾರ, ರೂಪ ಪಡೆದಿವೆ.
ಇವನ ಬುಟ್ಟಿಯಲ್ಲಿ ಎಲ್ಲ ಬೊಂಬೆಯೂ ಉಂಟು. ಗಣಪತಿ, ಕೃಷ್ಣ-ರಾಧೆ, ಶಿವ-ಪಾರ್ವತಿ, ವಿವೇಕಾನಂದ, ಗಾಂಧೀಜಿ, ಏಸುಕ್ರಿಸ್ತ, ನವಿಲು, ಡುಮ್ಮ-ಡುಮ್ಮಿ, ಗಿಣಿಗಳು, ಅಳುವ ಮಗು, ಬಸವಣ್ಣ, ಗಾಂಧೀಜಿಯವರ ತತ್ವ ಸಾರುವ ಮೂರು ಕೋತಿಗಳು…. ಒಂದೆ, ಎರಡೇ ಇವನ ಬುಟ್ಟಿ ಎಂದರೆ ಒಂದು ಮಿನಿ ಭಾರತವಿದ್ದಂತೆ! ಅದರೊಳಗೆ ಎಷ್ಟೊಂದು ಬಣ್ಣದ ವಿಭಿನ್ನ ರೀತಿಯ ಬೊಂಬೆಗಳು! ಒಂದೊಂದು ಬೊಂಬೆಗೂ ಅದರದ್ದೇ ಆದ ಮಹತ್ವ, ತತ್ವ, ಅದರದ್ದೇ ವಿಭಿನ್ನ ರೂಪು, ಚಾಪು. ಬೊಂಬೆಗೆ ಬಳಿದ ಬಣ್ಣಗಳೂ ಬೇರೆ ಬೇರೆ. ಆದರೆ ಎಲ್ಲಾ ಬೊಂಬೆಗಳನ್ನು ತಯಾರಿಸಲು ಉಪಯೋಗಿಸಿದ ಮೂಲವಸ್ತು ಮಾತ್ರ ಒಂದೇ!
ಸಖಿ, ಒಮ್ಮೆ ಆ ಬೊಂಬೆಗಳಿಗೆ ಮಾನವರನ್ನು ಹೋಲಿಸಿ ನೋಡಿಕೊಂಡರೆ, ಹೇಗೆ? ಆ ಬೊಂಬೆಗಳಂತೆಯೇ ನಮ್ಮೆಲ್ಲರ ಹುಟ್ಟಿನ ಮೂಲಧಾತು ಒಂದೇ. ಅದೇ ರಕ್ತ ಮಾಂಸ ಜೀವ… ಇತ್ಯಾದಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹುಟ್ಟಿಗೆ ಮೊದಲೇ ಮಗುವಿನ ಜಾತಿಯನ್ನು ಗುರುತಿಸುವ ಯಾವ ಸಂಕೇತವನ್ನೂ ಮಗುವಿನಲ್ಲಿ ನಾವು ಕಾಣುವುದಿಲ್ಲ. ಆದರೆ ಮಗು ಹುಟ್ಟಿದೊಡನೆ, ಹುಟ್ಟಿದ ಮನೆಯ ಜಾತಿ, ಭಾಷೆ, ಸಂಸ್ಕಾರ, ಆಚಾರ ವಿಚಾರಗಳಿಗೆ ತಕ್ಕಂತೆ ಮಗುವಿನ ಪರಿಸರವೂ ನಿರ್ಮಾಣವಾಗುತ್ತದೆ. ಮುಸಲ್ಮಾನರ ಮನೆಯಲ್ಲಿ ಹುಟ್ಟಿದ ಜೀವ ಮುಸ್ಲೀಮನಾಗುತ್ತದೆ. ಹಿಂದುವಿನ ಮನೆಯಲ್ಲಿ ಹುಟ್ಟಿದ ಜೀವ ಹಿಂದುವಾಗುತ್ತದೆ. ಹಾಗೇ ಇನ್ನಿತರ ಜಾತಿಗಳಲ್ಲಿ ಹುಟ್ಟಿದ ಜೀವವೂ ಕೂಡ. ಆದರೆ ವಿಶಾಲಾರ್ಥದಲ್ಲಿ ವಿವೇಚಿಸಿದರೆ ನಾವಲ್ಲರೂ ಒಂದೇ!
ಈ ಸರಳ ತತ್ವವನ್ನೇ ಸಂಕುಚಿತಗೊಳಿಸಿರುವ ನಾವು ಮೇಲು-ಕೀಳು, ಶ್ರೇಷ್ಠ-ನೀಚ ಎಂದೆಲ್ಲಾ ಕಿತ್ತಾಡಿ ಹೊಡೆದಾಡುತ್ತೇವೆ. ನಮ್ಮ ಬಣ್ಣ, ರೂಪ, ಆಚಾರ, ವಿಚಾರ, ವೇಷಭೂಷಣ, ಬುದ್ಧಿ, ವಿವೇಕ ಎಲ್ಲವೂ ವಿಭಿನ್ನವಾಗಿಯೇ ಇರಬಹುದು- ಆದರೆ ಬೊಂಬೆಗೆ ಮೂಲವಸ್ತು ಒಂದೇ ಇದ್ದಂತೆ, ನಮ್ಮೆಲ್ಲರ ಹುಟ್ಟಿಗೆ ಕಾರಣವಾಗಿರುವ ಮೂಲಧಾತು ಒಂದೇ! ಇವನ್ನೆಂದೂ ನಾವು ಮರೆಯಬಾರದು. ಅಲ್ಲವೇ ಸಖಿ?
*****