ರಸ ತುಂಬಿದ ಬಣ್ಣ ಬಣ್ಣದ ಹಣ್ಣ
ಕೈಯಲ್ಲಿ ಹಿಡಿದುಕೊಂಡು, ಬಾಯಲ್ಲಿಡದೆ
ನೋಡುತ್ತಾ ಕೂಡುವುದೇನೋ!
ಹಾಗೆ ನೋಡುವಾಗ ಊರಿನಿಂತ ಬಾಯಿನೀರೇನೋ!
ಒತ್ತಿ ಹಿಚುಕದೆ, ಕಿತ್ತೆಸೆದು ಸಿಪ್ಪೆಸುಲಿಯದೆ,
ಮುಖ ಮೈಗಳ ಮುಟ್ಟಿಮುಟ್ಟಿ ಬಾಯಿ ಬಿಡುವುದೇನೋ!
ಮೂಸಿ ಮೂಗು ತುಂಬಿಕೊಳ್ಳುತ್ತಾ
ಕಣ್ಣು ಮುಚ್ಚಿಕೊಳ್ಳುವುದೇನೋ!
ಅಷ್ಟಿಷ್ಟು ನೀರುಂಡು ಸವಿಗೂಂಡ ನೆಲ
ಬಂದೇ ಬರುವನೆಂದು ನಲ್ಲನೆದುರು ನೋಡುತ್ತ
ನಾಳಿನ ಸುಖವ ಮೆಲಕು ಹಾಕುತ್ತ
ಹಣೆಗೆ ಕೈ ಹಚ್ಚಿ ದೂರದೂರದ ದಾರಿಯ
ನೋಡುತ್ತಾ ನಿಲ್ಲುವುದೇನೋ!
ಯಾವುದೋ ದನಿಕೇಳಿ, ಯಾವುದೋ ರೂಪನೆನೆದು,
ಯಾವುದೋ ಬೆಂಕಿ ಮೈಯಲ್ಲಿ ಹರಿದಾಡಿ
ಝರಿಯೊಳಗೀಜಿದ್ದನ್ನು ದಂಡೆಯಲ್ಲಿ ಕುಳಿತೇ
ನೆನೆದು ಮೈಪುಳಕದಿಂದ ಅರಳುವುದೇನೋ!
ಈ ನೆಲ ಈ ಗಾಳಿ ಈ ಬೆಳಕು ಈ ನೀರ
ಹಂಗುದೊರೆದು ಬಯಲಾಗುವುದನ್ನೂಹಿಸಿ
ಮಣ್ಣ ಮಡಿಕೆಯಲ್ಲೇ ಮೈ ಮುದುಡಿಕೊಂಡು
ಮುಚ್ಚಳ ಬೋರಲು ಹಾಕಿಕೊಳ್ಳುವುದೇನೋ!
*****