೧
ಗಾಲಿ ಉರುಳಿದಂತೆ-ಕಾಡಿನ
ಗಾಳಿ ಹೊರಳಿದಂತೆ-
ಬಾನ ದೇಗುಲದ
ಬೆಳ್ಳಿ ಗೋಪುರದ
ಘಂಟೆ ಮೊಳಗಿದಂತೆ,
ಹಾಲು ಕಂಚಿನ
ಹೊನ್ನ ಮಿಂಚಿನ
ಘಂಟೆ ಮೊಳಗಿದಂತೆ,
ಊರ ದಾರಿಯಲಿ
ಹೂವ ತೇರಿನಲಿ
ಕೃಷ್ಣ ಬರುವನಂತೆ!
೨
ಎತ್ತಿ ನೋಡು ಕಣ್ಣ, ಬಾನಿಗೆ
ಹತ್ತಿ ಹೊಳೆವ ಬಣ್ಣ!
ಬೆಳದ ಭಕ್ತಿಯೇ ಊರ ದೇವರಿಗೆ
ತೇರು ಆಯಿತಣ್ಣ!
ಗುಡಿಯ ಮಟ್ಟದ
ಗುಡುಗು ಹುಟ್ಟುವ
ನಡೆದು ಬರುವ ಬೆಟ್ಟ!
ಗಿರಿಯನೆತ್ತಿದ
ಕೊಳಲ ಬಿತ್ತಿದ
ಕೃಷ್ಣ ಬಂದುಬಿಟ್ಟ,
ಚೆಲುವ ಬಂದುಬಿಟ್ಟ!
೩
ಗೋಪಿ ನೀನೆ ಧನ್ಯೆ! – ಕೃಷ್ಣ
ನಿನ್ನ ಕಂದನೇನೆ?
ಇಲ್ಲಿ ನೋಡು ತಾನೇ ತನ್ನ
ತೇರನೇರಿದಾನೆ!
ಕೊಳಲ ಬಾರಿಸದೆ
ಜಗವ ತೋರಿಸದೆ
ಹಿಗ್ಗಿ ಬರುತಿದಾನೆ.
ಚರಣ ಚಂದ್ರಿಕೆಗೆ
ಜೀವ ಹಿಗ್ಗುತಿದೆ
ಕೃಷ್ಣ ಬರುತಿದಾನೆ-
ತೇರಮೇಲೆ ತಾನೆ.
೪
ತೇರು ಬಂತು ದಾರಿ-ದಾರಿ!
ಹಣ್ಣು ದವನ ಬೀರಿ!
ಬೀದಿ ತಿರುಗಿನಲಿ
ಜನದ ಕರಗಿನಲಿ
ತೇರು ಬಂತು ದಾರಿ!
ತಡೆದು ಗುಡುಗಿ ಬಹ
ದೊಡ್ಡ ತೇರು, ಅಹ!
ಬಿಡಿರಿ ಬಿಡಿರಿ, ದಾರಿ!
ಮುತ್ತ ಮೆಟ್ಟಿರುವ
ಮಕುಟವಿಟ್ಟಿರುವ
ಕೃಷ್ಣ ಬಂದ, ದಾರಿ!
೫
ಸೆರಗ ಸೆಳೆದರಿಯ, ಬೆಣ್ಣೆ ಕದ್ದರಿಯ;
ಚೆಲುವ ಬಂದ, ದಾರಿ!
ಹಣೆಯ ಕತ್ತುರಿಯ, ತಿಲಕದಚ್ಚರಿಯ
ಕಂದ ಬಂದ, ದಾರಿ!
*****