ನರ್ತಕಿ ಬಂದಳು ಛಲ್‌ಝಲ್ ನಾದದಿ
ಠಮ ಢಮ ತಾಳಕೆ ಕುಣಿಯುತ್ತ
ಪಾತರಗಿತ್ತಿಯ ಆ ಕುಣಿತ.
ಪಾರ್ಥ ಸುಭದ್ರೆಯ ರಾಧಾಕೃಷ್ಣರ-
ನೊಬ್ಬಳೆ ತಾನೆಂದೆಣಿಸುತ್ತ
ರಂಗಸ್ಥಳದಲಿ ತಿರುಗುತ್ತ.
ತುಟಿಯಿಂದುರುಳುವ ಹಾಡಿನ ತನಿರಸ
ಮೌಕ್ತಿಕ ಮಣಿಯಂತುರುಳುವುದು;
ತಾಳದ ಓಜೆಗೆ ಜಾರುವುದು!
ಕತ್ತಲೆ ನಡುವಣ ಚಂದ್ರನ ಬಿಂಬವೊ
ಕೆದರಿತ ಹೆರಳದು ಇಕ್ಕೆಡೆಯು
ಸುಂದರ ಮುಖವೊ ಮಿನುಗೆಲೆಯು.
ಕಣ್ಣಾಲಿಗಳನು ಹೊರಳಿಸಿ ಉರುಳಿಸಿ
ದುಂಡನೆ ರುಂಡವನಲುಗಾಡಿ;
ಕಣ್ಣನು ಮೂಗಿನ ಮೇಲಿರಿಸಿ
ಕುಣುಕುಣು ಮೊಣಕಾಲಾಟದಿ ನೋಟದಿ
ಕೊಂಕಿಸಿ ನಡುವನು ಆ ಮಳ್ಳಿ
ಚಂಚಲ ಮಿಂಚಿನ ಬಾನ್‌ಬಳ್ಳಿ!
ಫಾರಸಿ ಹಿಂದೀ ವಂಗೀಯ ಕಲೆ
ಒಂದಾಯಿತು ಇಂದೀ ಮೇಳ!
ಬೃಂದಾವನದ ಆ ಲೀಲಾ!
ಬಂದಳು ನರ್ತಕಿ ಕೈಗಳ ಬೀಸುತ
ಕೆಳಮೇಲಾಂಗಗಳಾಡಿಸುತ
ಮೆಟ್ಟುತ ಬೆಟ್ಟಲಿ ಆ ಕುಣಿತ.
ಓಹೋ ಓಹೋ ಕನ್ನಡ ಗಾನ
‘ಕಥಕಳಿ’ಯಾಟದ ಬಯಲಾಟ
ಭರತನ ನಾಟ್ಯದ ಮನನೋಟ.
ಲಾಸ್ಯಾನರ್ತನ ನಟಕೇಸರಿ ಮನ
ಜುಂ ಝುಂ ಛಲ್ ಛಲ್ ಈ ಓಜ,
ನರ್ತನ ತೋರಿದ ನಟರಾಜ.
ಹೊರಳುವ ಅಂಗಗಳಾಟವ ನೋಡಿರೊ
ಬೆರಳನು ತೋರವ ತಿರುಳನ್ನು
ಕೊಂಕಿಸಿ ಕಾಲಿನ ನಿಲುವನ್ನು!
ದುಂಡನೆ ತಲೆಯನಲುಗಿಸಿ ತೋರುವ
ಮನ್ಮಥ ಕರೆಯೊ ಅದು ಕೇಳೊ!
ಚಕ ಚಕ ಎದೆಯ ಗೆಲುನೋಡೊ.
ಬಗ್ಗಿದಳೆದ್ದಳು ಹಾರಿದಳೋಡಿದ-
ಳೆಂತೀ ಆಟದ ಈ ಬಲ್ಮೆ
ಕುಲುಕಿತ ಅಂಗಗಳೀ ನಲ್ಮೆ.
ಊರ್ವಶಿ ರಂಭೆಯರಾದಿನದಾಟವ
ತೋರುತ ನರ್ತಕಿ ಬಂದಳದೊ,
ಕುಡಿನೋಟಾಡಿಸಿ ಕುಣಿವಳದೊ!
ಗಿರಿಗಿಟ ತಿರುಗಿದ ತೆರದಲಿ ತಿರುಗಿತು,
ಧಕಥಕ ಧೀಂಕಿಟ ಹಾರಿದಳು
ಗಾಳಿಯ ನರ್ತನ ತೋರಿದಳು.
ವಾನರ ಚೇಷ್ಟಾ ಗೋಷ್ಠಿಯಲಿರಿತಳು
ಹಿಂದೂ ಮುಂದೂ ಜೋಲಾಡಿ
ತನಗೇ ತಾನೇ ತೂಗಾಡಿ.
ಸೂರ್ಯನ ಕಾಂತಿಯ ನೋಡುತ ಭ್ರಾಂತಿಯಿಂ
ಥೈ ಥೈ ಹಾರಿತು-ಆ ರಭಸ
ಲೇ ಲೇ ತಟ್ಟುವ ಪದನ್ಯಾಸ!
ಢಮರುಗ ಭಾರಿಸಿ ಲೋಕವ ತಿರುಗಿಸಿ
ನರ್ತನ ತೋರಿದ ಪರಮೇಶ;
ಬಂದಳು ನರ್ತಕಿ-ಆ ವೇಷ!
*****