ರಾಜ ಮಕುಟಗಳು ತಿರುಕರಂತಿದ್ದ ಗುರುಪಾದವ ಚುಂಬಿಸುತ್ತಿದ್ದವು
ಹರಮುನಿದರೂ ಗುರುಕಾಯ್ವನೆಂಬ ಹಿರಿಮೆ ಇತ್ತು
ಅರಿವೇ ಗುರುವಾಗಿ ಜ್ಞಾನ ಪ್ರಭೆ ಹರಿದಿದ್ದುಂಟು ಈ ನೆಲದಲ್ಲಿ
ಹೋಗಲಿ ಬಿಡಿ! ಇದೆಲ್ಲ ಒಮ್ಮೆ ಇದ್ದ
ತುರುಬನ್ನು ಈಗಿನ ಬೋಳು ತಲೆಯಲ್ಲಿ ಮುಟ್ಟಿಕೊಂಡಂತಾದೀತು
ಕಂಡದ್ದಾಡಿದರೆ ಕೆಂಡವಾದೀರಿ ನೀವು,
ಗಂಡೆಂದರೆ ಪುಲ್ಲಿಂಗ, ಹೆಣ್ಣೆಂದರೆ ಸ್ತ್ರೀಲಿಂಗ
ಮೇಷ್ಟ್ರು ಎಂದರೆ ನಪುಂಸಕ ಲಿಂಗವಾಗಿದ್ದೇವೆ
ಅಣ್ಣಂದಿರಾ ನಾವು ದನಕಾಯುವವರಿಗೆ
ಕುರಿಕಾಯುವವರಿಗೆ ಸಮವಾಗಿದ್ದೇವಲ್ಲರೋ!
ಕಾಗೆಗಳಡವಿಯಲ್ಲಿ ಕೂಗುವ ದನಿಯಿಲ್ಲದ ಕೋಗಿಲೆಗಳು ನಾವು
ಮೂಲೆಯಲ್ಲಿ ಕೂಡಿಸಿದ ಮೂದೇವಿಗಳು
ಬಾಯಲ್ಲಷ್ಟು ತುರುಕಿ ಕೂಡಿಸಿದ ಅಳುವ ಕೂಸುಗಳು ನಾವು
ಬಡಗಂಡನ ಬಾಳಿಗೊಗ್ಗದೆ ಬಡಿವಾರಗಿತ್ತಿಯರ ವೇಷಗಳಿಗೆ
ಕರುಬುತ್ತಾ ಹೊಟ್ಟೆ ಉರಿದುಕೊಳ್ಳುತ್ತೇವೆ
ಗುರುತ್ವ ಪೀಠವನಲಂಕರಿಸಿದ ಮಹಾ ತಿರಸ್ಕೃತರು ನಾವು
ಆದರ್ಶಶಿಖರದಿ ಹೊನ್ನಶೂಲಕ್ಕೇರಿಸಿದ್ದರೂ
ನೋವ ನುಂಗಲಾರದೆ ಶೂಲಮೂಲವ ಕೀಳಲೂ ಆಗದೆ
ಪರಿತಪಿಸುತ್ತಿದ್ದೇವೆ
ಕೊಳಚೆ ಕಡಲ ತಿಳಿಹೊಳೆಯಿಂದ ತೊಳೆಯುವ
ಕಗ್ಗಲ್ಲ ಕಾಡ ಶಿಲ್ಪನಂದನವಾಗಿಸಲು ಹೂವಿಂದ ಕಟೆಯುವ
ವೃಥಾ ಸೆಣಸಾಟ ನಮ್ಮದು |
ವಾಸ್ತವ ಕುರೂಪ ಮೈಗೆ ಹೊಂದದ ಬಟ್ಟೆಗಳ ಹೊಲಿದು
ಬಹಳವೆಂದರೆ ಗಿಳಿಗಳ, ಪುಸ್ತಕ ಹುಳುಗಳ
ಸರ್ಟಿಫೀಕೇಟು ಶಿಖಂಡಿಗಳ ಉತ್ಪಾದಿಸುತ್ತೇವೆ
ರಾಜಕಾರಣ ಪರಮಾತ್ಮನ ಕೈಗೊಂಬೆಗಳು ನಾವು
ಈ ನೆಲದ ಅಸಂಖ್ಯರಂತೆ ಆತನ ಯಂತ್ರದ ಹಲ್ಲುಗಳಾಗಿ
ನುಚ್ಚು ಕೊಚ್ಚುತಾ ತೌಡು ಕುಟ್ಟುತ್ತಾ ಕೊಳೆಯುತ್ತಿದೇವೆ.
*****