ಬರ್ರಿ ಹೀಗೇ ದೇಶಾವರಿ, ಮಾತಾಡಾಣ,
ನಿಮ್ಮ ಕಡೆ ಮಳೆ ಬೆಳಿ ಹೆಂಗೆ? ಅಷ್ಟೇ! ಎಲ್ಲಾ ಕಡಿಗೂ
ದೇಶಾದಾಗೆಷ್ಟು ಪಾರ್ಟಿಗಳನಾ ಇರಲಿ
ನಮ್ಮೂರಗೆಳ್ಡೆ ಪಾರ್ಟಿ ನೋಡ್ರಿ ಎಂದೆಂದಿಗೂ,
ನಿಮ್ಮೂರಾನ ಪಾರ್ಟಿಗಳು ಎಷ್ಟು ಮನಿ ಮುರದುವು?
ಎಷ್ಟು ಬಣವಿ ಸುಟ್ಟು ಎಷ್ಟು ಪಂಪಸೆಟ್ ಕಳವು ಮಾಡಿಸಿದುವು?
ಎಷ್ಟು ಕಳವು ಮಾಡಿಸಿದುವು, ಎಷ್ಟು ತಾಳಿ ಕಿತ್ತವು?
ಎಷ್ಟು ಮನಿ ದೀಪಾ ತಗದುವು?
ನಿಮ್ಮೂರ ದೇವ್ರುಗಳು ಎಷ್ಟು ಸಾಲಾ ಮಾಡಿಸಿದುವು?
ಹಳೆ ಬಾವಿಗಳಾಗೆಷ್ಟು ಹಳಸು ಗ್ವಾತ ಹಾಕಿದುವು?
ಜಾತಿ ಭೇದದ ಬೇರಿಗೆಷ್ಟು ನೀರು ಹಾಕಿದುವು?
ನಿಮ್ಮೂರ ರಾಕ್ಷಸರು ಎಷ್ಟು ಬಾಳ್ವೆ ಕೆಡಿಸಿದರು?
ಎಷ್ಟು ರಂಡೇರ ಎಷ್ಟು ಗರ್ಭಪಾತ ಮಾಡಿಸಿದುವು?
ಹೊಸಗಾಳಿಗಳಾಗೆ ಎಷ್ಟು ತೂರಿಕೊಂಡು ಗೂಳ್ಯಾಗಿ ಮೆರದರು?
ಹುಚ್ಚು ಮುಂಡೇ ಮದುವ್ಯಾಗೆಷ್ಟು ಜಾಣರುಂಡರು?
ಎಷ್ಟು ಹರೇವುಗಳು ಹದ್ದುಮೀರಿ ಓಡಿದುವು?
ಎಷ್ಟು ಹಾದರಾ ಬಾವ್ಯಾಗೆ ತೇಲಿದುವು? ತಿಪ್ಯಾಗೆ ಹೂಳಿದುವು?
ಎಷ್ಟು ಮಣಕಾ ಹಳೇ ಎತ್ತುಗಳ ಕಾಲಾಗೆ ಬಿದ್ವು?
ಇನ್ನು ದೇಶದ ದೇಶಾವರೀನಾ!
ಊರುಡಾಳರ ಆಡಳಿತಾ, ಕಳ್ಳ ಕದೀಮರ ಮೆರೆತಾ
ಹಸಗೆಟ್ಟ ದೇಶದ ದೇಹಸ್ಥಿತಿಗೆ ಹೊಸ ಕಂತ್ರಿ ಔಷಧ,
ದಿನದಿನಕೆ ರೋಗ ಉಲ್ಬಣ, ದೇಹ ಬರೀ ಮೂಳೆ ತೊಗಲು
ಕೆಲವು ಕಡಿಗೆ ಹಣದುಬ್ಬರದ ಕೀವು ಬಾವು
ಪೊಳ್ಳು ಆಶ್ವಾಸನಗಳ ಗುಳ್ಳೆ ತೇಲ್ತಾವೆ,
ಐದು ವರ್ಷದಾಗೆಷ್ಟು ಬೇಕೋ ಅಷ್ಟು ಕಾರಭಾರ
ಅವರ ಮನೆತನ ಕಳಬಳ್ಳೆಲ್ಲ ನಾಕೈದು ತಲೆಮಾರ ಹಾರಭಾರಾ
ಇವತ್ತು ಕೈಕೈ ಮಿಲಾಪು ನಾಳೆ ಕುತ್ತಿಗೆ ಕುತ್ತಿಗೆ ರೋಪು
ಹೀಂಗೇ ನಾಟಕಾ ನಡದಾದ ಸ್ವಾಮೀ!
ದೇಶದಾಗ ದೇಶ ಉಳಿದಿಲ್ಲ ಬರೀ ದೇಶಾವರೀನೇ ನಡದಾದ
*****