ಅಗೊ ಹೋಗುತ್ತಿವೆ ನೋಡಿ ನೋಟುಗಳ ಸಾರೋಟುಗಳು
ಹಣದ ಹೆಣಗಳ ಮೆರವಣಿಗೆಗಳು
ರಣಹದ್ದುಗಳ ಕಾಲುಗುರು ಕೊಕ್ಕುಗಳು
ಗಂಟೆ ಜಾಗಟೆಗಳ ಶಂಖವಾದ್ಯಗಳು
ಜುಟ್ಟು ಜನಿವಾರ ಸಿವುಡುಗಂಟುಗಳು
ನಾಮ ಪೇಟಗಳ ಪೇಟೆ ಮಾಮೂಲು ಮಾಲುಗಳು
ಬರೀ ಮೈಯಲ್ಲಿ ಹುಟ್ಟುಬಟ್ಟೆಯಲ್ಲೇ
ಬರುವ ಪ್ರಾಣಲಿಂಗಿಗಳಿಗಿಲ್ಲಿ ಕೋಲುಪೂಜೆ
ಕಾಲಕೆಳಗೆ ಪ್ರಾಣವೊತ್ತೆ ಇಡಬೇಕಿಲ್ಲಿ ಹುಷಾರ್,
ಕಾಮಣ್ಣ ಕಣ್ಣ ಬಾಣ ಬಿಡುತ್ತಾನೆ ಕುಣಿಕೆಯಲ್ಲಿ ಜಾರೀಯೆ,
ನೀ ಮಾಡಿದ್ದು ಮನೆಯಲ್ಲೇ ಉಂಡು ಬಾ
ಹೊರಗೆ ತಂದರೆ ನಗೆ ಪಾಟಲು
ಬಸ್ಸು ಲಾರಿಯ ಗಾಲಿಗೆ ಸಿಕ್ಕು ಹೋದೀಯೆ
ಬರಿಗಡಿಗೆ ಮನೆಯಲ್ಲಿ ಹಾಡುತ್ತಿದ್ದರೇನು ವೇದಾಂತ
ಶೂನ್ಯ ಸಿದ್ಧಾಂತ,
ತಾಂಬೂಲ ಸೇವಿಸಿ ಬಾಯಿ ಕೆಂಪಾಗಿಸಿಕೊಂಡು ಬಾ
ನಗು ಹಾದರದ ನಗು
ಗಂಟಿಗೆ ಗಂಟು ಹಾಕಿ ಬಿಗಿ ಮೋರೆಯ ಯಾರೂ ಬಿಚ್ಚಲಾರದಂತೆ
ಹಾಯ್ದು ಹೋದವನಿಗೆ ಹಲ್ಲು ಬೀರಿ ಹಲ್ಲೋ ಎನ್ನು ಸಾಕು
ಯಾವುದೇ ಕೂಸು ಕುನ್ನಿ ಕುಂಟು ಕುರಡ
ಯುವುದೋ ಕುರುಡುಗಾಲಿಗೆ ಬಲಿಯಾದರೆ
ಕೈಹಿಡಿದೆತ್ತಲು ಹೋದಿಯಾ ಯಾಕೆಂದರೆ
ಎತ್ತಿದವನಿಗೆ ಬೀಳುತ್ತದೆ ಕುರುಡು ಕಾನೂನಿನ ಲತ್ತೆ
ಅಗೋ ಏನೋ ಗುಂಪು ಘೋಷಣೆ
ಯಾವನೋ ಕೂಗಿ ಕಣ್ಮರೆಯಲ್ಲಿದ್ದರೂ
ಈಗ ಗುಂಪಾಗಿ ಗಾಳಿ ಕೂಗುತ್ತಿದೆ
ಕುರಿಯಾಗಿ ಕೂಗಿಬಿಡು, ಯಾಕೆಂದರೆ
ಯಾವುದೇ ಗುಂಪಿಗೆ ಘೋಷಣೆಗೆ ಒಳಗಾಗದಿದ್ದರೆ
ಪಿತೂರಿಗಾರನಿವನೆಂದು ಸಂಶಯದ ಕಣ್ಣು ಬೆನ್ನಟ್ಟುವುದು
ಎಲ್ಲಿಯಾದರೂ ತಲೆಯ ಮೇಲೆ ನಿಂತೀಯಾ
ಮೇಲೆ ಹರಿದು ಹೋದಾವು ನೂರಾರು ಕಾಲು, ಹೊಟ್ಟೆ, ಕೋಲು
ಎಚ್ಚರ ಇದು ಬೀದಿ ಬಜಾರ
ಇಲ್ಲಿ ತಾಳಿದವನು ಬಾಳಿಯಾನು ಅಲ್ಲ
ಓಡುವವನು ಮುಂದೆ ಹೋದಾನು
ತಾಳಿದವನು ಕೊಳೆತು ಹೋದಾನು
*****