ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ
ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ
ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು
ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು
ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು
ನನ್ನ ಎದೆಯ ನೆಲವ ಕೂಡ ಮೀಯಿಸಿದ್ದನು
ಬಸ್ಸು ಲಾರಿ ಸದ್ದು ಕೇಳಿ ಭಯವ ತಾಳಿ
ಬಂದು ನನ್ನ ಮಡಿಲಿನಲ್ಲಿ ಅಡಗುತಿದ್ದನು
ನಿನ್ನೆ ಮೊನ್ನೆ ನಡೆಯುವುದನು ಕಲಿಯುತಿದ್ದನು
ಕೈಯ ಚಾಚಿ ಚಿಕ್ಕೆಗಳನು ಹೊಕ್ಕು ನೋಡಿ ಬರುವೆನೆಂಬ
ಉದಯ ಸೂರ್ಯನನ್ನು ತಿಂಬ ಹಣ್ಣೆ ಎಂಬನು
ಹೊಟ್ಟೆಗೆಷ್ಟು ಕೊಟ್ಟರೇನು ಮಣ್ಣ ತಿಂಬನು
ಅವನ ಕಣ್ಣು ಕೋಪದಲ್ಲಿ ಸೂರ್ಯಾಸ್ತದ ಕೆಂಪನುಗುಳಿ
ನನ್ನ ಕಣ್ಣ ಸರಸಿನಲ್ಲಿ ಬಿಂಬಿಸಿದ್ದಿತು
ಮುದ್ದು ಬಾರೊ ಎನಲು ಎನ್ನ ಚುಂಬಿಸಿದ್ದಿತು
ನಾನು ಹೊರಗೆ ಹೋಗುವಾಗ ಹೋಗಬೇಡವೆಂದು ತೊಡರಿ
ಜಗದ ಜೀವಿ ನಾನು ಹೋಗೆ ಅಳುತಲಿದ್ದಿತು
ಎತ್ತ ಹೋದರಿತ್ತ ಮನಸು ಸೆಳೆಯುತಿದ್ದಿತು
ತನ್ನ ಬಾಯಿ ಮಣ್ಣಿನಲ್ಲಿ ಸೃಷ್ಟಿಯನ್ನೆ ತುಂಬಿಸಿತ್ತು
ತನ್ನ ಹಣೆಯ ಮುಂಗುರಳಲಿ ನನ್ನ ಸುತ್ತಿತು
ನನ್ನ ಕರುಳ ಕುಡಿಯು ನಗಲು ಅಳುವೆ ಸತ್ತಿತು
ನನ್ನ ಮನದ ದಿವ್ಯಮೂರ್ತಿ ನನ್ನ ಜೀವ ಭಾವ ಕೀರ್ತಿ
ಎತ್ತ ಹೋಯಿತೇನೊ ಪಾಪ ತಿಳಿಯದಾಗಿದೆ
ಕರುಳುಕಿತ್ತು ಹೊರಗೆ ಬರುವ ದುಃಖವಾಗಿದೆ
ನೀನು ನೋಡಿದೇನೆ ಅಕ್ಕ ನಿನಗಾದರು ಗೊತ್ತೆ ತಂಗಿ
ಅಣ್ಣ-ತಮ್ಮ ನೀವಾದರು ಹೇಳಲಾರಿರಾ
ಮಗುವ ನಾನು ಕಾಂಬ ಪರಿಯ ತೋರಲಾರಿರಾ
*****