ನಾನು ಪ್ರಕೃತಿ ಶಿವ ಸತ್ಕೃತಿ ನನ್ನ ಗುಣವ ಹೇಳುವೆ
ನೀನು ವಿಕೃತಿಯಾಗಿ ಬಂದೆ ದುಃಖಗಳನು ತಾಳುವೆ
ಭೂಮಿಯೊಳಗೆ ನಾನು ಆಳ ಬೇರು ಬಿಟ್ಟು ನಿಂತಿಹೆ
ಗಗನದಲ್ಲಿ ತಲೆಯನೆತ್ತಿ ಚೆಲುವನೆಲ್ಲ ಹೊತ್ತಿಹೆ
ಮಣ್ಣಿನೊಳಗೆ ಒಡಬೆರೆಯುತ ಭದ್ರವಾಗಿ ಬೆಳೆದಿಹೆ
ಸಣ್ಣಪುಟ್ಟ ಗಾಳಿಯಲ್ಲಿ ಬೆದರದಂತೆ ಉಳಿದಿಹೆ
ನಾನು ಒಂದೇ ಇದ್ದರೂ ನೂರು ಕೈಗಳಿರುವುವು
ಬಾನಿನಲ್ಲಿ ಹರಡಿಕೊಂಡು ಹೂವು ಹಣ್ಣು ಕೊಡುವುವು
ಬಿಸಿಲು ಗಾಳಿ ಮಳೆಯು ಚಳಿಯು ಎಲ್ಲ ನನ್ನ ಮಿತ್ರರು
ಅವರ ಜೊತೆಗೆ ಸಹ ಬಾಳ್ವೆಯು ಕೃತಜ್ಞತೆಗೆ ಪಾತ್ರರು
ಒಳಗೆ ನೋವೆ ತುಂಬಿಕೊಂಡೆ ಹರಿಯುತಿಹುದು ಜೀವನ
ಹಸಿರು ನಗೆಯ ಹೊರಗೆ ತೋರೆ ಚೆಲುವಾಯಿತು ಈ ವನ
ಹೂವ ಮುಡಿದು ಫಲವ ಪಡೆದ ಸಂತಾನವ ಬೆಳೆಸುವೆ
ಪ್ರಾಣಿ ಪಕ್ಷಿಗಳಿಗಾಸರೆ ಕೊಡುತ ಅವನು ಬೆಳೆಸುವೆ
ಎಲೆಯುದುರಿಸಿ ಚಿಗುರು ಪಡೆದು ಉಡಿಗೆ ಬೇರೆಯಾದರೂ
ಬೇರದೊಂದೆ ದೇಹವೊಂದೆ ಮೇಲುಪರೆಯು ಹೋದರೂ
ನನ್ನಚೆಲುವ ಕಂಡು ಮಣಿವ ಭಕ್ತರಿಹರು ಜಗದಲಿ
ನನ್ನ ಸೊಗವ ನೋಡಿ ಹಾಡಿ ದಣಿಯದಿಹರು ಬೆರಗಲಿ
ಹುಟ್ಟು ಸಾವು ನೋವು ಬೇವು ಎಂದು ನಾನು ಚಿಂತಿಸೆ
ಸಾಗರದೀ ಸೃಷ್ಟಿಯಲ್ಲಿ ಅಲೆಯು ನಾನು ಯೋಚಿಸೆ
ಅದರಿಂದಲೇ ಮರವಾದರು ನಾನು ಅಮರ ಎಂದಿಗು
ಮರ್ತ್ಯ ಮನುಜ ನೀನು ಕೂಡ ಅಮರನಾಗು ಎಂದಿಗು
*****