ಚುನಾವಣೆಗೆ ನಿಂತ ಮಠಾಧೀಶರು

ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟಿಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. ಯಾವಾಗಲೂ ಸುದ್ದಿಗದ್ದಲ ಮಾಡುವ ಈ ತಾಯಿ ಚುನಾವಣೆಗೆ ನಿಲ್ಲೋದು ಭಾರಿ ಸುದ್ಧಿಯೇನಲ್ಲ. ಆದರೆ ಬೆರಗಾದವರು, ಬೆವತು ನಾರಿದವರು ಮಾತ್ರ ಇತರೆ ಮಠಾಧೀಶರು. ಧರ್ಮ ಬೇರೆ ರಾಜಕೀಯವೇ ಬೇರೆ ಎಂದು ಹೇಳುತ್ತಲೇ ಎರಡನ್ನೂ ಮಿಕ್ಸ್ ಮಾಡಿ ಕುಡಿದ ಮಠಪತಿಗಳು ರಾಜಕಾರಣಿಗಳನ್ನೇ ನಿಯಂತ್ರಣದಲ್ಲಿಟ್ಟುಕೊಂಡ ಖದೀಮರು. ಬೇಕಾದವರನ್ನು ನಿಲ್ಲಿಸಿ ಗೆಲ್ಲಿಸಬಲ್ಲಂತಹ ಖಾದಿ ತೊಡದ ದೈವಾಂಶ ಸಂಭೂತರು. ಆದರೂ ರಾಜಕೀಯಕ್ಕಿಳಿಯಲು ಎಂತದೋ ಹಿಂಜರಿಕೆ. ಈಯಮ್ಮ ವತಾರ ಗೆದ್ದು ಮಂತ್ರಿ ಪದವಿಗೇರಿ ಬಿಟ್ಟರೆ ಎಂಬ ತಳಮಳ. ಮಠಾಧೀಶರ ಮೊಬೈಲುಗಳು ದಿಧೀರನೆ ಮಾತಿಗಿಳಿದವು.

ತಮ್ಮ ಕಾಲೇಜು, ಕ್ಯಾಪಿಟೇಶನ್ ಡೆವಲಪ್‌ಮೆಂಟ್ಸ್‌, ಜನಾಂಗದವರ ಉದ್ಧಾರ ಇಂತದಕ್ಕೆಲ್ಲಾ ರಾಜಕೀಯ ಸರದಾರರ ಎದುರು ಹಲ್ಲುಗಿಂಜುವ ಬದಲು ತಾವೇ ಸರದಾರರಾಗಿ ದೇಶ ಮತ್ತು ಜನತೆ ನಿಜಕ್ಕೂ ಸೆಂಟ್ ಪರ್ಸೆಂಟ್ ಪ್ರಕಾಶಿಸುವಂತೆ ಮಾಡಬಾರದೇಕೆ ಎಂದು ದಿನವಿಡೀ ಆಲೋಚನೆಗಿಳಿದರು. ವೀರಶೈವ ಮಠಾಧೀಶರೆಲ್ಲರಿಗೂ ‘ತುರ್ತು ಸಭಗೆ’ ಕರೆ ಹೋಯಿತು. ಅಪವಾದ ಬಾರದಿರಲೆಂದು ಬ್ರಾಂಬ್ರ ಪೇಜಾವರ ಮತ್ತು ಒಕ್ಕಲಿಗರ ಬಾಲಗಂಗಾಧರರನ್ನೂ ಸಭೆಗೆ ಬರಹೇಳಿದರು. ಮುಖಂಡತ್ವ ಎಂದಿನಂತೆ ಸುತ್ತೂರು ಮಠಾಧೀಶರು ಮತ್ತು ಹೈಟೆಕ್ ಜಗದ್ಗುರು ಸಿರಿಗೆರೆಯವರದ್ದೇ. ನೂರಾರು ಸ್ವಾಮಿ, ಮರಿಸ್ವಾಮಿಗಳ ಜಾತ್ರೆ ನೆರೆದು ಪೆಂಡಾಲು ಹರಿಯಿತು. ಕಾರ್ಯಕ್ರಮದ ಬಂದೋಬಸ್ತಿಗೆ ಪೋಲೀಸರು ಹೆಚ್ಚಿನ ಪಡೆ ಕರೆಸಿಕೊಂಡರು. ನೆರೆದ ಅಸಂಖ್ಯ ಕಾವಿಧಾರಿಗಳನ್ನು ನೋಡಿ ಸ್ವಯಂ ಸುತ್ತೂರರಿಗೇ ತಲೆ ಸುತ್ತು ಬಂದರೆ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ನೋಡಿ ಸಿರಿಗೆರೆಯವರ ಮಾರಿಯಲ್ಲಿ ಸಿಡುಕು ಕಾಣಿಸಿಕೊಂಡಿತು. ಸ್ವಾಮಿಗಳಾದವರಿಗೂ ಈ ಪರಿ ರಾಜಕೀಯಾಸಕ್ತಿಯೇ ಅಂತ ಬಾಲಗಂಗಾಧರರು ಬೆಚ್ಚಿದರೆ, ಚಿತ್ರದುರ್ಗದ ಶರಣರು ಇಂಥ ವಿಚಿತ್ರ ಸಭೆಗೆ ಏಕಾದರೂ ಬಂದೇನೋ ಎಂದು ಕುಂತಲ್ಲೇ ಬೆವರೊಡೆದರು. ಮೊದಲ ಮಾತು ಸಿರಿಗೆರೆ ಶ್ರೀಗಳಿಂದಲೇ ಶುರುವಾಯಿತು.

“ರಾಜಕಾರಣಿಗಳು ಚುನಾವಣೆ ಬಂದಾಗ ಬಂದು ಕಾಲು ಹಿಡಿತಾರೆ, ಆಮೇಲೆ ಕ್ಯಾರೆ ಅನ್ನೊಲ್ಲ. ನಮ್ಮ ಸಮಾಜ, ಜನ ಐವತ್ತಾರು ವರ್ಷಗಳಿಂದ ಇದ್ದಲ್ಲೇ ಇದ್ದಾರೆ. ಖಾದಿಗಳ ಮರ್ಜಿಯನ್ನು ಹಿಡಿದಿದ್ದು ಸಾಕು. ಪ್ರಜಾಸತ್ತೆಯ ಉಳಿವಿಗಾಗಿ ದೇಶದ ಹಿತದೃಷ್ಟಿಯಿಂದ ನಮ್ಮ ನಮ್ಮ ಜಿಲ್ಲೆಗಳಿಂದ ನಾವೇ  ಸ್ಪರ್ಧಿಸೋಣ. ಅಧಿಕಾರದ ಬಲ ಗಳಿಸೋಣ. ಅಧಿಕಾರ ಇಲ್ಲದೆ ಅಣುರೇಣು ತೃಣಕಾಷ್ಠವೂ ಈವತ್ತು ಚಲಿಸೋದಿಲ್ರಿ ತಿಳಿತ್ರಾ” ಅಂದರು ಸುತ್ತೂರ ಶ್ರೀಗಳು. ಸಿರಿಗೆರೆ ಶ್ರೀಗಳ್ಯ್ ಮಾತನ್ನು ತಟಾರನೆ ಅನುಮೋದಿಸಿಯೇ ಬಿಟ್ಟರು.

“ನಾವು ಚುನಾವಣೆಗೆ ನಿಂತರೆ ಮಠದ ಹಣ ಖರ್ಚು ಮಾಡಬಾರದು. ಅದು ನನ್ನ ಏಕೈಕ ಕಂಡೀಷನ್ನು” ದುರ್ಗದ ಶರಣರು ತಟ್ಟನೆ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದರು.

“ಅದಕ್ಕೆ ಎದಕ್ರಿ ಹಣ ತೆಗೆಯೋದು? ನೋಟು, ಹೆಂಡ, ಖಂಡ, ಸೀರೆ ಹಂಚಿ ಓಟು ಕೇಳೋಕೆ ನಾವೇನು ರಾಜಕಾರಣಿಗಳೆ! ನಾವು ನಿಂತ್ರೆ ಹಂಗ್ ಆಗೋದಿಲ್ರಪಾ. ಭಕ್ತಾದಿಗಳೇ ಕಾಣಿಕೆ ಕೊಟ್ಟು ಮತಗಳ್ನೂ ಹಾತ್ತಾರೆ” ತಿದ್ದುಪಡಿ ಸೂಚಿಸಿದರು ಆದಿಚುಂಚನಶ್ರೀಗಳು. ಅವರ ಜಾಣ ಮಾತಿಗೆ ಎಲ್ಲರೂ ಗೋಣು ಆಡಿಸಿದ್ದೇ ಆಡಿಸಿದ್ದು.

“ನಾವು ಚುನಾವಣೆಗೆ ನಿಂತು ದಿಗ್ವಿಜಯ ಸಾಧಿಸೋದರಲ್ಲಿ ನೋ ಡೌಟ್. ಆಮೇಲೆ ಖಾತೆ ಹಂಚಿಕೆಯಾಗ್ಪೇಕು, ಮುಖ್ಯಮಂತ್ರಿ ಆಯ್ಕೆ ಆಗಬೇಕು, ಇತ್ಯಾದಿ, ಇತ್ಯಾದಿ” ಎಂದು ಕೀರಲು ದನಿ ತೆಗೆದರು ಪೇಜಾವರ ಸ್ವಾಮಿ, ಅವರ ಮಾತಿನ ಹಿಂದಿನ ಆಕಾಂಕ್ಷೆ ಅರಿತ ಸಿರಿಗೆರೆ ಶ್ರೀಗಳು ಮುಗುಳ್ನಕ್ಕರು. “ಅದು ಬಿಡಿ. ಮುಖ್ಯಮಂತ್ರಿ ಯಾರಾಗಬೇಕು ಅನ್ನೋದನ್ನು ಗೆದ್ದ ನಮ್ಮ ಶಾಸಕರು ನಿರ್ಧರಿಸುತ್ತಾರೆ. ಒಟ್ಯಾರೆ ಜನಹಿತ ಮುಖ್ಯ” ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಡಿದರು ಸಿರಿಗೆರೆ ಶ್ರೀ. ಪೇಜಾವರರು ಸಭೆಯತ್ತ ಒಮ್ಮೆ ಕಣ್ಣು ಕೀಲಿಸಿದರು.

ತಮ್ಮವರಿಗೋ ರಾಜಕೀಯ ಪ್ರಜ್ಞೆ ಕಡಿಮೆ; ಮಡಿ ಮೈಲಿಗೆ ಅಂತ ಈಚೆಗೆ ಬರೋಲ್ಲ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮಾಡಿದ್ದೂ ಸೊನ್ನೆ. ಬಿಜೆಪಿಯೋರನ್ನ ನಂಬಿದರೆ ರಾಮಮಂದಿರದ ಬದಲು ರಾಮನ ಮೂರು ನಾಮವೇ ಗತಿ. ಲಿಂಗಾಯತರ ಬಲದಲ್ಲಿ ತಾವು ಮುಖ್ಯಮಂತ್ರಿ ಅಗೋದು ಅನುಮಾನವೆಂದೇ ಹಪಹಪಿಸಿದರು.

“ಸರಿಯಾದ ದಿಕ್ಕಿನಲ್ಲಿ ಯೋಚಿಸಿದರೆ ನಮ್ಮೆಲ್ಲರಿಗಿಂತ ರಾಜಕೀಯ ಸೂಕ್ಷ್ಮ ತಿಳಿದವರು….. ಖಾದಿ ಒಡನಾಡಿಗಳು. ಹೈಟೆಕ್ ಜಗದ್ಗುರುಗಳೂ ಆದ ಸಿರಿಗೆರೆ ಶ್ರೀಗಳೇ ಮುಖ್ಯಮಂತ್ರಿ ಆಗಲು ಅರ್ಹರು” ಘೋಷಿಸಿದರು ಸುತ್ತೂರ ಮಠಪತಿ. ವೀರಶೈವ ಸಮೂಹವೇ ಚಪ್ಪಾಳೆ ತಟ್ಟಿ ಸ್ವಾಗತಿಸಿತು. ಜಯಕಾರಗಳೂ ಮೊಳಗಿದವು.

“ಈಗಲೇ ಸಿ.ಎಂ. ಮಾತು ಬೇಡ ಅಂತ ನಮ್ಮ ವಿನಂತಿ” ಕ್ಯಾತೆ ತೆಗೆದರು ದುರ್ಗದ ಶರಣರು. “ಹಿಂದುಳಿದವರಿಗೂ, ದಲಿತರಿಗೂ ನಾವು ಪ್ರಾಶಸ್ತ್ಯ ಕೂಡಬೇಕು. ದಲಿತರಲ್ಲೂ ಶರಣರಿದ್ದಾರೆ ನಾವೇ ಪಟ್ಟ ಕಟ್ಟೇವಿ. ಅವರನ್ನು ಕಡೆಗಣಿಸಬಾರದು” ಶರಣರು ಪಟ್ಟು ಹಿಡಿದರು.

“ಅವಿನ್ನೂ ಈಗ ಹುಟ್ಟಿ ಬೆಳಿತಾ ಅವೇರಿ. ಸದ್ಯಕ್ಕೆ ಕಾರ್ಯಕರ್ತರಾಗಿ ಕೆಲಸ ಮಾಡ್ಲಿ- ನಮ್ಮಲ್ಲೇ ಒಬ್ಬರು ಮುಖ್ಯಮಂತ್ರಿ ಆಗೋ ಮಾತು ತಾವಂದಂತೆ ಈಗಲೇ ಬೇಡ ಅಂತ ನಮ್ಮ ವಿವೇಚನೆಯೂ ಹೇಳ್ತಾ ಇದೆ” ಆದಿಚುಂಚನಗಿರಿ ಬಾಲಗಂಗಾಧರ ತಮ್ಮ ಅಭಿಪ್ರಾಯ ಮಂಡಿಸಿದರು. ಅವರಿಗೂ ಅಳಕು. ತಾವೇ ಉಳಿದವರಿಗಿಂತ ಪ್ರಭಾವಿಗಳು. ಧನಕನಕ ವಸ್ತು ವಾಹನದೊಂದಿಗೆ ಹೆಲಿಕ್ಯಾಪ್ಟರ್ ಸಹ ಇದೆ. ಆದರೇನು ವೀರಶೈವ ಕೋಮು ಬಲವಾಗಿದೆ. ನಮ್ಮ ಜನಾಂಗದಲ್ಲಿ ಹೆಚ್ಚಿನ ಮಠಗಳಿಲ್ಲ. ದೇವೇಗೌಡನ ಮಾತು ಕೇಳಿದ್ದರೆ ಚೆಂದವಾಗಿತ್ತೇನೋ ಎಂದು ಮಮ್ಮಲ ಮರುಗಿದರು.

“ಹಾಗಲ್ಲ ಸ್ವಾಮೀಜಿ. ಸಿರಿಗೆರೆಯೋರನ್ನೆ ಸದ್ಯಕ್ಕೆ ಮುಖ್ಯಮಂತ್ರಿ ಅಂದುಕೊಳ್ಳೋಣ ಬಿಡಿ” ಹಿಂದಿನ ವಿರಸ ಮರೆಸಲು ಗದುಗಿನ ಶ್ರೀಗಳು ಪರವಹಿಸಿ ಮಾತನಾಡಿದರು. “ಹಾಗಾದರೆ ಯಾವ ಖಾತೆ ಯಾರಿಗೆ ಅಂತ ಅಂದುಕೊಳ್ಳಲೇನಡ್ಡಿ?” ಚಡಪಡಿಸಿದರು ಶರಣರು.
“ಅಡ್ಡಿಯಿಲ್ಲ ನಮ್ಮ ಬಾಲಗಂಗಾಧರರು ಫೈನಾನ್ಸ್ ನೋಡಿಕೊಳ್ಳಲಿ” ಸಿರಿಗೆರೆ ಪ್ರಭುಗಳು ಧಾರಾಳತನ ತೋರಿದರು. “ಬ್ಯಾಡ್ರಿ ನಮ್ಗೆ ಹೋಮೇ ಇರ್ಲಪ್ಪಾ” ಮುನಿದರು ಚುಂಚನಗಿರಿ ಶ್ರೀ.

“ನಮ್ಮ ಗುರುಗೋಳು ಉಪಮುಖ್ಯಮಂತ್ರಿಯಾಗಲೆ ಬೇಕ್ರಿ” ಒಕ್ಕಲಿಗರ ಭಕ್ತರ ಒಕ್ಕೊರಲಿನ ಆರ್ತನಾದ ಕೇಳಿತು. “ಭಕ್ತರೂ ಬಂದಾರೇನ್ರಿ! ಅಡ್ಡಿಯಿಲ್ಲ ….  ಅಂದರು. ಸಿರಿಗೆರೆ ಶ್ರೀಗಳು. “ನಮ್ಮ ಸುತ್ತೂರು ಶ್ರೀಗಳು ಫೈನಾನ್ಸ್ ನೋಡ್ಕೋತಾರೆ” ಎಂದು ತಿದ್ದುಪಡಿ ಮಾಡಿದರು. “ರೆವಿನ್ಯೂ ಖಾತೆನಾ ಇಳಕಲ್ಲ ಮಹಂತಪ್ಪ ಅವರಿಗೆ ವಹಿಸಿದ್ರೆ ಹೆಂಗ್ರಿ?” ತಮ್ಮ ಬೆಂಬಲಿಗರೊಬ್ಬರನ್ನು ಬೆಂಬಲಿಸಿದರು ದುರ್ಗದ ಶರಣರು.

“ಪೇಜಾವರರಿಗೆ ಮುಜರಾಯಿ ಕೊಡೋಣ. ದೇವಸ್ಥಾನಗಳೆಂದರೆ ಬಲು ಪ್ರೀತಿ” ವೀರಸೈವ ಮಠಪತಿಯೊಬ್ಬರು ಸೂಚಿಸಿದರು. ಪೇಜಾವರರ ವಕಾಲತ್ತಿಗೆ ಯಾರೂ ಬಾರದಿದ್ದಾಗ ಪಕ್ಕದಲ್ಲಿದ್ದ ಬನ್ನಂಜೆ ಗೋವಿಂದಾಚಾರ್ಯರೇ ಆಕ್ಷೇಪವೆತ್ತಿದರು.

‘ನಮ್ಮ ಶ್ರೀಗಳು ಪ್ರಧಾನಮಂತ್ರಿ ಮೆಟೇರಿಲ್ಲು ಬುದ್ಧಿ. ಅವರಿಗೆ ಬಲವಾದ ಖಾತೆಯೇ ಹಂಚಬೇಕು.”

“ಅಡ್ಡಿಯಿಲ್ಲ ರೆವಿನ್ಯೂ ಆಗಬಹುದೆ?” ಭಾವಿ ಮುಖ್ಯಮಂತ್ರಿಗಳ ಔದಾರ್ಯ. ಆಗಲಾದರೂ ಪೇಜಾವರರು ದಪ್ಪವಾಗಬಹುದು ಎಂದು ಹಿಗ್ಗಿದ ಬನ್ನಂಜೆ ಸೈ ಸೈ ಎಂದರು. ಇಳಕಲ್ಲ ಸ್ವಾಮಿ ನಿರ್ಭಾವ ತೋರಿ ಹುಸಿನಗೆ ಬೀರಿದರು.

“ಆತ್ರಪಾ ವಾರ್ತಾ ಮತ್ತು ಪ್ರಚಾರ ಖಾತೆ ಒಂದ್ಯೆತಲ್ರಪಾ?” ದುರ್ಗದ ಶರಣರು ಗುರ್ ಎಂದರು.

“ಅದನ್ನು ರಾಘವಪುರ ಭಾರತಿಸ್ವಾಮಿಗಳಿಗೆ ಕೊಟ್ಟರಾಯಿತೇಳ್ರಿ” ಸಿರಿಗೆರೆ ಶ್ರೀ ನಕ್ಕರು. ಹೆಂಗಾದಾತು? ಆ ಖಾತೆ ನಮ್ಮ ಶರಣರಿಗೇ ಇರ್ಲಿ” ಎಂದು ಆ ಮಠದ ಆಡಳಿತಾಧಿಕಾರಿ ಪಟ್ಟು ಹಿಡಿದು ಕುಂತ.

“ಅಡ್ಡಿಯಿಲ್ಲ. ಅವರಿಗೆ ಹೇಳಿ ಮಾಡಿಸಿದ ಖಾತೆ” ತಲೆಯಾಡಿಸಿದರು ಭಾವಿ ಮುಖ್ಯಮಂತ್ರಿ.

“ಹೌದ್ರಪ್ಪಾ ರಾಜಕಾರಣಿಗಳೂ ನಮ್ಮ ಜೊತೆನಾಗೆ ಗೆದ್ದು ಬರ್ತಾರಲ್ಲ ಅವರಿಗೇನ್ ಮಾಡ್ತೀರಿ?” ನೀಲಗುಂದ ಸ್ವಾಮಿಗಳ ತಹತಹ. “ಜೈಲು ಖಾತೆನೋ, ಸಕ್ಕರೆ ಖಾತೇನೋ ಕೊಟ್ಟರಾತಿಲ್ಲೋ ಬಿಡ್ರಿ. ಇಷ್ಟು ವರ್ಷ ಅವರು ಕಡಿದು ಗುಡ್ಡೆ ಹಾಕಿದ್ದು ಅಷ್ಟರಲ್ಲೇ ಅದೆ” ರಾಂಗಾರಾದರು ಸಿರಿಗೆರೆಶ್ರೀ. “ಹೌದ್ರೀಯಪಾ ೨೨೪ ಸೀಟಿಗೆ ನಿಲ್ಲಿಸೋ ಅಷ್ಟು ನಮ್ಮೋರು ಅದಾರೇನ್ರಿ”

“ತಲಾಶ್ ಮಾಡೋದ್ರಪಾ. ನಾವು ಗೆದ್ವಿ ಅಂತಿಟ್ಕೊಳಿ. ರಾಜಕಾರಣಿಗಳೇ ನಮ್ಮ ಪಕ್ಷಕ್ಕೆ ಜಂಪ್ ಮಾಡ್ತಾರೆ” ಸಿರಿಗೆರೆ ಶ್ರೀ ಸಾಂತ್ವನಿಸಿದರು. “ಮಹಾಸ್ವಾಮಿಗಳು ಪಂಚಪೀಠದವರನ್ನು ಕಡೆಗಣಿಸಬಾರ್ದು” ಯಾರೋ ಗದ್ದಲವೆಬ್ಬಿಸಿದರು.

“ಅವರೇ ಸಭೆಗೆ ಬಂದಿಲ್ಲವಲ್ರಿ. ಅವರು ನಾವು ಸೇರಿದರೆ ಮತ್ತೊಂದು ಜನತಾದಳ ಆದೀತು ನೋಡ್ರಪಾ” ಸಿರಿಗೆರೆ ಶ್ರೀಗಳ ಮಾತಿಗೆ ಎಲ್ಲೆಡೆ ನಗುವೋ ನಗು.

“ಇದೀಗ ಅಸಲಿ ಪ್ರಶ್ನೆಗೆ ಬರೋಣ. ನಮ್ಮ ಪಕ್ಷಕ್ಕೆ ‘ಶರಣ ಪಕ್ಷ’ ಅಂತ ಹೆಸರಿಸೋಣ ದುರ್ಗದ ಶರಣರು ಒತ್ತಾಯ ತಂದರು. ಸಭೆ  ಆನುಮೋದಿಸಲಿಲ್ಲ.

“ಪಕ್ಷೇತರರಾಗಿ ಮೊದಲು ಗೆಲ್ಲೋಣ ತಾಳ್ರಿ” ಸಿಡುಕಿದರು ಭಾವಿ ಮುಖ್ಯಮಂತ್ರಿ.

“ಆದರೆ ಪಕ್ಷಕ್ಕೊಂದು ಚಿಹ್ನೆ ಬೇಕಲ್ರಿ ಸ್ವಾಮೀಜಿ …… ಬಸವಣ್ಣನೇ ಚಿಹ್ನೆ ಆದ್ರೆ ಹೆಂಗೆ?” ಶರಣರು ಮೂಲಭೂತ ಸಮಸ್ಯೆ ಎನ್ನುತ್ತಾ ಬಸವ ಪ್ರೇಮವನ್ನೂ ಮೆರೆದರು.

“ಬೇಡ ಲಿಂಗ ನಮ್ಮ ಚಿಹ್ನೆಯಾಗಲಿ” ಎಂದು ಕೆಲವರು ಕೊಡವಿಕೊಂಡೆದ್ದು ನಿಂತರು.

“ಅದು ಜಾತಿ ಸಂಕೇತವಾಯಿತು” ಲೋಪವೆತ್ತಿದ ಪೇಜಾವರರು. “ರಾಮಾಯಣದ ಸಂಪುಟ ನಮ್ಮ ಚಿಹ್ನೆಯಾಗಲಿ” ಅಂತ ಕನಲಿ ಕೆಂಡವಾದರು.

“ಹಂಗಾರೆ ಬಸವಪುರಾಣ ಯಾಕಾಗಬಾರ್ದು ಬುದ್ದಿ?” ಪ್ರಶ್ನೆಗಳೆದ್ದವು ಭೂತಗಳಂತೆ.

“ವಿಭೂತಿ ನಮ್ಮ ಚಿಹ್ನೆಯಾಗಲಿ”

“ಮೂರು ನಾಮ ಯಾಕಾಗಬಾರ್ದು?” ಎಲ್ಲೆಡೆ ಚಿಹ್ನೆಗಾಗಿ ಗದ್ದಲವೋ ಗದ್ದಲ. ಕಾವಿ ನಿಲುವಂಗಿಗಳು ಹರಿದು ಕೈ ಕೈ ಮಿಲಾಯಿಸಿದವು. ರಾಮನಿಗೆ ಧಿಕ್ಕಾರವೆಂದರು, ಶಿವನಿಗೆ ಧಿಕ್ಕಾರ ಎಂದೂ ಅರಚಾಟ ನಡೆಯಿತು. ಕೆಳಗಿದ್ದವರೆಲ್ಲಾ ವೇದಿಕೆಯ ಮೇಲೆ ಏರಿದರು. ವೇದಿಕೆ ಧಡಾರನೆ ಕುಸಿಯಿತು.

ಮಂಚದಿಂದ ಕೆಳಗೆ ಬಿದ್ದ ನಾನು ಆಕ್ಸಿಡೆಂಟ್ ಆದ ಕೈಗೇ ಪುನಃ ಪೆಟ್ಟುಬಿದ್ದು ಜೋರಾಗಿ ನರಳುತ್ತಾ ಕಿಟಕಿಯತ್ತ ನೋಡಿದೆ. ಬೆಳಗಾಗುತ್ತಿದೆ. ಬೆಳಗಿನ ಜಾವದ ಕನಸು ನಿಜವಾಗುತ್ತಂತೆ…. ಹೌದೇನ್ರಪಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಲ್ಲದಿದ್ದರೇನು?
Next post ಅಮರ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…