ಯಕ್ಷಿಯನ್ನು ತೊರೆದಂದು ಯಕ್ಷ ಕಳಿಸಿದ್ದ ಮೇಘ ದೂತ
ಪತ್ರ ಒಯ್ಯಲಿಕೆ ದಾರಿಯಿಲ್ಲದಿತ್ತಾಗ ಭಾವ ದೂತ
ಅಕ್ಷರಕ್ಷದ ಯಕ್ಷ ಲೋಕವನು ಪತ್ರ ತೋರದೇನು
ರಕ್ತ ರಕ್ತ ಉಸಿರಿಸುವ ರಾಗ ಅನುರಕ್ತಿ ಹರಿಸದೇನು
ದೇಹ ದೂರದಲಿ ಇದ್ದರೇನು ಈ ದಾಹಕೆಲ್ಲಿ ದೇಹ
ಮನೋಲೋಕದಲಿ ಬರೀ ಭಾವ ಬೆಳದಿಂಗಳ ಪ್ರಭಾವ
ಭಾವ ಲೋಕದಲಿ ವಿಹರಿಸುವುದು ಕೆಲ ಭಾವುಕರಿಗೆ ಸಾಧ್ಯ
ದೇಹತೃಷೆಯ ಮೀರಿರುವ ಬಂಧನವು ಸವೆಯದಂಥ ಖಾದ್ಯ
ನಿನ್ನ ಹೃದಯ ದೇಗುಲವ ಸಿಂಗರಿಪ ಭಾಗ್ಯವಂತ ನಾನು
ನನ್ನ ಮನವ ಸಿಂಗರಿಪ ಮಾನಿನಿಯೆ ಚಿಂತೆ ಬೇಡವೇನು
ದೂರ ದೂರದಲಿ ಕಾಂಬ ಗುಡ್ಡವದು ಮಾಲೆಮಾಲೆ ನೀಲಿ
ಮುಳ್ಳುಕಲ್ಲುಗಳು ಅಲ್ಲಿ ಬಹಳ ಇವೆ ನಡೆಯಬೇಕು ತೇಲಿ
ಚೆಲುವೊ ಒಲವೊ ಬಾಳೆಲ್ಲ ಭವ್ಯತೆಗೆ ಏರೆ ಮಾತ್ರ ಯೋಗ್ಯ
ಬಣ್ಣ ಬದುಕು ಬರಡಾದ ಮೇಲು ಉಳಿಯುವುದು ಪ್ರೇಮ ಭಾಗ್ಯ
ಕೂಡುವಂಥ ಸುಖಕಿಂತ ಕೂಟ ಹಾರೈಕೆ ಸೊಗಸು ಏನೊ
ತಿನ್ನುವಂಥ ಸವಿಗಿಂತ ತಿನ್ನಲಿಹ ಬಯಕೆ ರುಚಿಯೊ ಏನೊ
ತನುವು ಹುಟ್ಟಿ ಬೆಳೆದಾಡಿ ಅಳಿಯುವುದು ನಿತ್ಯಜೀವ ಯಾತ್ರೆ
ಮನದ ಭಾವ ಶ್ರೀಮಂತ ಲೀಲೆಯದು ಸತ್ಯ ಚೈತ್ಯ ಯಾತ್ರೆ
ನಮ್ಮ ಜನ್ಮಗಳ ಗಂಟು ಎನ್ನುವರು ಗಂಡು ಹೆಣ್ಣು ಜೋಡಿ
ಜೋಡಿ ಜೋಡಿಗಳು ಒಂದೆ ಎಂದರೇಕಿಷ್ಟು ಹೆಚ್ಚು ರಾಡಿ
ಹಿಂದು ಮುಂದು ಜನುಮಗಳ ಕಂಡವರು ಯಾರೊ ಎಲ್ಲೋ ಏನೊ
ಇಂದು ನಾಳೆಗಳು ನಮ್ಮ ಕೈಯಲಿವೆ ಕೂಡಿ ಬಾಳೆ ಜೇನೊ
ಏನೂ ಅಳಿಯುವುದು ಏನೊ ಉಳಿಯುವುದು ಉಳಿವುದೊಂದೆ ಗುರಿಯು
ಇಹವು ಕಳೆದರೂ ಪರವು ಉಳಿಯುವುದು ಜೀವಿಗದುವೆ ಗುರಿಯು
ಅಂದು ಕೊಳ್ಳುವುದು ಆಡಿಕೊಳ್ಳುವುದು ಮಾತು ಬರಹವೊಂದು
ಮಾಡಿಕೊಳ್ಳುವುದು ಕಂಡು ಕೊಳ್ಳುವುದು ನಡತೆ ಬೇರೆಯೊಂದು
ಉದ್ದ ಉದ್ದ ಮೈಲುದ್ದ ಬರೆದರೇನೊಂದು ಮಾಡದಲ್ಲೆ
ಮೆರಗು ಬೆರಗು ಬುರುಗೆಲ್ಲ ಹೋಗಿರಲು ಪ್ರೇಮ ನೋಡೆ ನಲ್ಲೆ
ಏನು ಬಯಸದೆಯೆ ಬಂದುದನ್ನು ವರವೆಂದು ತಿಳಿಯೆ ಸುಖವು
ಗುಡ್ಡದಾಸೆ ಬರಿಕಡ್ಡಿಯಾಗಿ ಹೋದೀತು ಗುಳ್ಳೆ ಮುಖವು
ನನಗೆ ನೀನು ನಾ ನಿನಗೆ ಎನ್ನುವುದು ಕೆಲವು ದಿನದ ಸೆಳೆತ
ನೀನು ನಾನು ಬೇರೊಬ್ಬಗಾಗಿ ಎನ್ನುವುದು ಕೊನೆಯ ಎಳೆತ
*****