ಹಳೆಗನ್ನಡದ ಆಸೆ ಕರೆಯಿತು ನನ್ನ
ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ
ಪರಂಪರೆಗೆ,
ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ.
ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ
ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ
ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ. ನೀರೊಳಗೊಬ್ಬ
ಬೆವರಿದ್ದಕ್ಕಲ್ಲ, ಬೆವರನ್ನು ಕಾವ್ಯ ಮರೆಯದ್ದಕ್ಕೆ,
ಕಟ್ಟಿದರಿವರು, ಮುಟ್ಟಿದರು, ಹಿಡಿದೊತ್ತಿ ಮೆಟ್ಟಿದ-
ರೆಂಬ ಅಗ್ಗಳಕ್ಕಲ್ಲ. ಅಷ್ಟಕ್ಕೆ ಅಷ್ಟು ಉತ್ಸಾಹ-
ಗೊಂಡರೆಂದು.
ಪಂಪನಿಗೊಂದು ಬನವಾಸಿ ದೇಶ. ನನಗೂ ಒಂದು ಹುಟ್ಟೂರು.
ಸಮಾನಾಂತರಗಳನ್ನು ಕಂಡುಕೊಳ್ಳುವ ತವಕ
ಚರಿತ್ರೆಯ ಕಡೆಗೆ ನಾನು, ನನ್ನ ಕಡೆಗೆ ಚರಿತ್ರೆ
ಕೈಚಾಚುವುದರಲ್ಲಿ. ಮತ್ತೆ ಕಟ್ಟಿದ ಮಾಲೆಗಳು
ಮುಡಿವವರಿಗಾಗಿ, ಮುದ್ರಿಸಿದ ಪುಸ್ತಕಗಳು ಓದುಗರಿಗಾಗಿ
ಹುಡುಕುತ್ತಿರುವುದೇನೂ ಇಂದಿನದಲ್ಲ.
ಹೀಗೆ ಹುಡುಕುವುದು ಮನಸ್ಸಾಕ್ಷಿ
ಚರಿಪಾರಣ್ಯದ ಪಕ್ಷಿ.
*****