ಟಾಮೀ ಟಾಮೀ ನಮ್ಮನೆ ನಾಯಿ
ಚುರುಕು ಅಂದರೆ ಚುರುಕು,
ಆದರೆ ಸದಾ ಬೊಗಳುತ್ತಿರುವುದು
ಅದರ ಬಾಯೇ ಹರಕು!
ತಿಂಡಿ ಎಂದರೆ ಕಿವಿಯನು ಎತ್ತಿ
ಬಾಲ ಕುಣಿಸುವುದು,
ವಾಸನೆ ಬಂದರೆ ಅಡಿಗೇ ಮನೆಗೇ
ಸೀದಾ ನುಗ್ಗುವುದು!
ಅಜ್ಜಿ ಮಡಿಯಲಿ ಬಂದರೊ ಟಾಮಿ
ಓಡಿ ಮುಟ್ಟುವುದು!
ಶನಿ ಮುಂಡೇದೆ ಎನ್ನುತ ಬಡಿಯಲು
ಕುಂಯ್ ಕುಂಯ್ ಗುಟ್ಟುವುದು.
ಪಕ್ಕದ ಮನೆಯ ಭಟ್ಟರ ಕಂಡರೆ
ಬೌ ಬೌ ಬೊಗಳುವುದು,
ಕಿಟ್ಟೂ ಪುಟ್ಟೂ ಆಟಕೆ ಬಂದರೆ
ಥಕ ತೈ ಕುಣಿಯುವುದು.
ದೂರ ಇದ್ದರೆ ಯಾರೇ ಇರಲಿ
ಜೋರು ಬೊಗಳುವುದು,
ಅಟ್ಟಿ ಬಂದರೆ ಬಾಲ ಮುದುರಿ
ಒಳಗೇ ಓಡುವುದು!
*****