ಪ್ರಿಯ ಸಖಿ,
ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ.
ದೊಡ್ಡವರು ಸಣ್ಣವರಾಗುವುದು
ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ
ತಮೆಗೆಲ್ಲ ಗೊತ್ತಿದೆ ಎಂದು ತಿಳಿದುಕೊಂಡಾಗ
ತಮ್ಮ ನಂತರ ಮುಂದೆ
ಪ್ರಲಯವೇ ಎಂದು ಭಾವಿಸಿದಾಗ
ಸಾಮಾನ್ಯವಾಗಿ ಹಿರಿಯರು ನಮ್ಮ ಕಾಲದಲ್ಲಿ ಹೀಗಿತ್ತು ನಮ್ಮ ಕಾಲವೇ ಚೆನ್ನ, ಕಾಲ ಕೆಟ್ಟು ಹೋಯ್ತು, ಮುಂದೆ ಭವಿಷ್ಯವೇ ಕಾಣುತ್ತಿಲ್ಲ ಇತ್ಯಾದಿ ಮಾತನಾಡುತ್ತಿರುತ್ತಾರೆ. ಹಾಗೆಂದು ಬದಲಾವಣೆಯೇ ಇಲ್ಲದೇ ಇರಲು ಬದುಕು ನಿಂತ ನೀರಲ್ಲ. ಈ ದೊಡ್ಡವರು ಹಿಂದೊಮ್ಮೆ ಚಿಕ್ಕವರಾಗಿದ್ದರು ಆಗಲೂ ಅವರ ಹಿರಿಯರು ಇವರನ್ನು ಇದೇ ಮಾತುಗಳಿಂದ ಚುಚ್ಚುತ್ತಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು. ತಾವೆಲ್ಲ ಎಲ್ಲವನ್ನೂ ಮಾಡಿಬಿಟ್ಟಿದ್ದೇವೆ, ಬದುಕಿನಲ್ಲಿ ಎಲ್ಲವೂ ನೋಡಿದ್ದೇವೆ. ನಮಗೆ ಪ್ರಪಂಚದ ಆಗು ಹೋಗುಗಳೆಲ್ಲ ತಿಳಿದಿದೆ, ತಮ್ಮ ನಂತರ ಮುಂದೆ ಬದುಕೆಂಬುದಕ್ಕೆ ಅರ್ಥವೇ ಇಲ್ಲ ಎಂದು ಕಿರಿಯರನ್ನು ತಾತ್ಸಾರದಿಂದ ಕಾಣಲಾರಂಭಿಸಿದಾಗ, ದೊಡ್ಡವರು ಸಣ್ಣವರಾಗುತ್ತಾ ಹೋಗುತ್ತಾರೆಂದು ಕವಿ ಹೇಳುತ್ತಾರೆ. ನಂತರ, ಮುಂದುವರಿಯುತ್ತಾ ಹೀಗೆ ಪ್ರಶ್ನಿಸುತ್ತಾರೆ.
ನಿಮ್ಮ ನಂತರ ಬೀಜ ಮೊಳೆಯುವದಿಲ್ಲವೇ ಸ್ವಾಮಿ?
ಸಸಿ ಬೆಳೆಯುವುದಿಲ್ಲವೇ?
ಸೂರ್ಯ ಮೇಲೆದ್ದಾಗ ನೀರು
ಥಳಥಳಿಸುತ್ತ ಹೊಳೆಯುವುದಿಲ್ಲವೇ?
ರವಿಬಿಂಬ ಕಣ್ಣುಗಳ ಕುಕ್ಕುವುದೇ ಇಲ್ಲವೇ?
ಸಖಿ, ಬದುಕು ಎಲ್ಲಿಯೋ ಒಂದು ಕಡೆ ನಿಂತುಹೋಗುವುದಿಲ್ಲ. ಅದು ನಿರಂತರವಾಗಿ ಚಲಿಸುತ್ತಲೇ ಇರುತ್ತದೆ. ಹಾಗೇ ಹೊಸತೆನ್ನುವುದೂ ಇಲ್ಲಿ ಅನಿವಾರ್ಯ. ಕಾಲಕ್ಕೆ ತಕ್ಕಂತೆ ಪರಿಸ್ಥಿತಿಗೆ ಹೊಂದಿಕೊಂಡು ಕಾಲನೊಂದಿಗೇ ಮುಂದೆ ಹೋಗುವವನು ವಿವೇಚನಾ ಶೀಲನೆನಿಸಿಕೊಳ್ಳುತ್ತಾನೆ. ಅದು ಬಿಟ್ಟು ನನ್ನ ಕಾಲದ್ದೇ ಸರಿ ಮುಂದಿನ ಬದುಕು ಸರಿಯಲ್ಲ ನಾನು ನಿಂತಲ್ಲೇ ನಿಂತಿರುತ್ತೇನೆ ಎಂದರೆ ಕಾಲ ಅವನನ್ನು ಹಿಂದೆ ತಳ್ಳಿ ತಾನು ಮುಂದೋಡುತ್ತದೆ! ಅಲ್ಲವೇ ಸಖಿ?
*****